ಕಲ್ಯಾಣ ಕರ್ನಾಟದಲ್ಲಿ ಸ್ಥಳೀಯ ಆಡಳಿತ ಬಲವರ್ಧನೆ; ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್: ಪ್ರಿಯಾಂಕ್ ಖರ್ಗೆ

vidhanasoudha
Published on

ಬೆಂಗಳೂರು: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್’ ಸ್ಥಾಪಿಸಿದೆ.

ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಫೆಲೋಗಳನ್ನು ಎರಡು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸ್ಥಳೀಯ ಆಡಳಿತ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಈ ಫೆಲೋಶಿಪ್ ಸ್ಥಾಪಿಸಲಾಗಿದ್ದು, ಪಂಚಾಯತ್ ರಾಜ್ ಕ್ಷೇತ್ರದಲ್ಲಿ ನಿರಂತರ ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ಸ್ಥಳೀಯ ಆಡಳಿತಕ್ಕೆ ಇವರು ನೆರವಾಗಲಿದ್ದಾರೆ. ಹೊಸ ದೃಷ್ಟಿಕೋನಗಳು, ಆಲೋಚನೆಗಳು ಮತ್ತು ಚಿಂತನೆಗಳ ಮೂಲಕ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿದ್ಯಾವಂತ, ತರಬೇತಿ ಪಡೆದ ಮತ್ತು ಪ್ರೇರಿತ ಯುವ ವೃತ್ತಿಪರರ ಕೌಶಲ್ಯತೆ ಬಳಸಿಕೊಳ್ಳುವುದು ಫೆಲೋಶಿಪ್ ಆರಂಭಿಸಿರುವ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನದಲ್ಲಿ ತೊಡಗಿಕೊಂಡು, ಸ್ಥಳೀಯ ಅಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಕ್ಷೇತ್ರಮಟ್ಟದ ಸ್ಥಿತಿ-ಗತಿ ಮತ್ತು ಕಲಿಕೆಗಳ ಅಧ್ಯಯನ ಮಾಡುವುದನ್ನು ಪ್ರಮುಖ ಹೊಣೆಯಾಗಿ ಈ ಯುವ ಸಮೂಹ ಹೊರಲಿದ್ದಾರೆ. ಕಾರ್ಯಕ್ರಮದ ಅವಧಿ ಎರಡು ವರ್ಷಗಳಾಗಿದ್ದು, ಆಯ್ಕೆಯದ ಫೆಲೊಗಳಿಗೆ ಮಾಸಿಕ 60ರೂ. ಶಿಷ್ಯವೇತನ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಫೆಲೋಗಳು ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ ಶ್ರೇಣೀಕರಣದಲ್ಲಿ ಕೊನೆಯಲ್ಲಿರುವ 10 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸಲಿದ್ದಾರೆ. ಅವಧಿ ಮುಗಿಯುವವರೆಗೆ ನಿಯುಕ್ತಿಗೊಳಿಸಲಾದ ತಾಲೂಕಿನಲ್ಲಿಯೇ ವಾಸ್ತವ್ಯ ಹೂಡಬೇಕಲ್ಲದೆ, ಗ್ರಾಮ ಪಂಚಾಯತಿಗಳಿಗೆ ನಿರಂತರವಾಗಿ ಪ್ರವಾಸ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ ಎಂಬ ನಿಯಮವನ್ನು ಹಾಕಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net