ಮಳೆಯಲ್ಲಿ ಸಿಲುಕಿಕೊಂಡಿದ್ದ ಬೆಕ್ಕಿನ ಮರಿ ರಕ್ಷಿಸಿದ; ನೆಟ್ಟಿಗರ ಮನಗೆದ್ದ

kitten
Published on

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ರಸ್ತೆಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿರುವ ಜನರ ಪರಿಸ್ಥಿತಿ ಹೇಳತೀರದಾಗಿದೆ. ಕೋವಿಡ್​-19 ಪಿಡುಗಿನಿಂದಾಗಿ ಮೌನವಾಗಿದ್ದ ನಗರದ ಜನಜೀವನ ಈಗ ಸಂಪೂರ್ಣ ಸ್ತಬ್ಧವಾಗಿದೆ.

ಇಂಥ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದ ಬೆಕ್ಕಿನಮರಿಯನ್ನು ಬೈಕ್​ ಸವಾರನೊಬ್ಬ ರಕ್ಷಿಸಿ, ತನ್ನೊಂದಿಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿರುವುದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಮುಂಬೈನ ಬಹುತೇಕ ರಸ್ತೆಗಳಂತೆ ವಾಡ್ಲಾ ಪ್ರದೇಶದ ರಸ್ತೆ ಕೂಡ ಜಲಾವೃತಗೊಂಡಿತ್ತು. ಇದರಿಂದಾಗಿ ಅಲ್ಲಿನ ಜನರ ಓಡಾಟಕ್ಕೆ ಭಾರಿ ತೊಂದರೆ ಉಂಟಾಗಿತ್ತು. ಇಂಥದ್ದರಲ್ಲಿ ಮೋರಿಯ ಬಳಿ ಬೆಕ್ಕಿನಮರಿಯೊಂದು ನೀರಿನಲ್ಲಿ ಸಿಲುಕಿಕೊಂಡು ರಕ್ಷಣೆಗಾಗಿ ಮೊರೆ ಇಡುತ್ತಿತ್ತು. ಅದರ ಸ್ಥಿತಿ ಕಂಡು ಆ ಮಾರ್ಗದಲ್ಲಿ ತೆರಳುತ್ತಿದ್ದ ಬೈಕ್​ ಸವಾರನೊಬ್ಬನ ಮನಕರಗಿತು.

ತಕ್ಷಣವೇ ವಾಹನವನ್ನು ನಡುರಸ್ತೆಯಲ್ಲೇ ನಿಲ್ಲಿಸಿದ ಆತ, ನಿಧಾನವಾಗಿ ಬೆಕ್ಕಿನಮರಿಯ ಬಳಿ ಹೋಗಿ, ಅದನ್ನು ಜೋಪಾನವಾಗಿ ಎತ್ತಿಕೊಂಡು ತನ್ನ ಬೈಕ್​ ಮೇಲೆ ಇರಿಸಿದ. ಬೆಕ್ಕಿನಮರಿಗೆ ಏನು ಮಾಡಬೇಕು ಎಂದು ತಿಳಿಯದೆ, ಬೈಕ್​ನಿಂದ ಎಗರಲು ಮುಂದಾಗುತ್ತಿದ್ದಂತೆ, ಅದನ್ನು ಸಮಾಧಾನ ಮಾಡಿದ ಆ ಬೈಕ್​ ಸವಾರ, ನಿಧಾನವಾಗಿ ಬೈಕ್​ ಹತ್ತಿ, ಬೆಕ್ಕಿನಮರಿಯೊಂದಿಗೆ ತೆರಳಿದ.

ದಾರಿಹೋಕರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಖಾಸಗಿ ಸುದ್ದಿಸಂಸ್ಥೆಯ ಟ್ವಿಟ್ಟರ್​ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ವೀಕ್ಷಿಸಿರುವ ಜನರು ಬೈಕ್​ ಸವಾರನ ಕೆಲಸ ಮೆಚ್ಚಿಕೊಂಡು ಅಭಿನಂದಿಸಿದ್ದಾರೆ. ಮಾನವೀಯತೆ ಇನ್ನೂ ಸತ್ತಿಲ್ಲ, ಅದು ಜೀವಂತವಾಗಿದೆ ಎಂದು ಕೆಲವು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net