

ಮಹದೇವಪುರ: ಸರಿಗಮಪ ಲಿಟಲ್ ಚಾಂಪ್ಸ್ ಖ್ಯಾತಿಯ ಜ್ಞಾನಾ ಗುರುರಾಜ್ ಹಾಗೂ ಸಿನಿಮಾ ಕ್ಷೇತ್ರದ ಬಾಲ ಪ್ರತಿಭೆ ರಚನಾ ಅವರನ್ನು ಶುಕ್ರವಾರ ಇಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಭಾರತೀಯರ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೂಡಿ ರಾಮಚಂದ್ರ ಚಿನ್ನಿ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಬಾಲ ಪ್ರತಿಭೆಗಳನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು.
‘ಇಬ್ಬರು ಬಾಲ ಪ್ರತಿಭೆಗಳು ಭಾರತ ಕಲಾರತ್ನ ಪ್ರಶಸ್ತಿ ಪಡೆದಿದ್ದು, ಭಾರತೀಯರ ಸೇವಾ ಸಮಿತಿ ವತಿಯಿಂದ ಅವರ ಸರ್ವತೋಮುಖ ಬೆಳವಣಿಗೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲಾಗುವುದು’ ಎಂದು ಹೂಡಿ ರಾಮಚಂದ್ರ ಚಿನ್ನಿ ತಿಳಿಸಿದರು. ರಕ್ಷಾ ಬಂಧನದ ಪ್ರಯುಕ್ತ ಸಂಘದ ಮಹಿಳಾ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಹೂಡಿ ರಾಮಚಂದ್ರ ಅವರಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು.