ಮತ್ತೆ ಬಡ್ಡಿ ದರ ಹೆಚ್ಚಿಸಿದ ಫೆಡ್ ರೂಪಾಯಿಗೆ ಆಘಾತ

sdfdfhgh
Published on

ವಾಷಿಂಗ್ಟನ್: ಹಣದುಬ್ಬರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್, ಬಡ್ಡಿ ದರವನ್ನು ಮುಕ್ಕಾಲು ಅಂಕ (75 ಮೂಲಾಂಶ) ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಬಡ್ಡಿ ದರದಲ್ಲಿ ಇದು ಮೂರನೇ ಏರಿಕೆಯಾಗಿದೆ. ಇದರ ಪರಿಣಾಮವು ಭಾರತೀಯ ಕರೆನ್ಸಿ ಮೇಲೆಯೂ ಉಂಟಾಗಿದ್ದು, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ.

ಅಮೆರಿಕ ಕೇಂದ್ರೀಯ ಬ್ಯಾಂಕ್ ಬಡ್ಡಿ ದರದ ಏರಿಕೆಯಿಂದಾಗಿ ಗ್ರಾಹಕರ ಸಾಲಗಳ ಬಡ್ಡಿ ದರವು ಶೇ. 3.25ಕ್ಕೆ ಏರಿಕೆಯಾಗಲಿದ್ದು, 2008ರಿಂದ ಇದುವರೆಗಿನ ಅತ್ಯಧಿಕ ದರ ಇದಾಗಿದೆ. ಈ ವರ್ಷಾದ್ಯಂತ ವೇಳೆಗೆ ಬಡ್ಡಿ ದರವು ಶೇ. 4.4ರವರೆಗೆ ಏರಿಕೆಯಾಗಬಹುದಾಗಿದೆ. ಅಲ್ಲದೆ, ಮುಂದಿನ ವರ್ಷ ದರವನ್ನು 4.6 ಕ್ಕೆ ಹೆಚ್ಚಬಹುದಾಗಿದೆ ಎಂದು ಅಮೆರಿಕದ ಬ್ಯಾಂಕ್ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಜೆರೋಮ್ ಪೊವೆಲ್, ‘ಫೆಡ್ ಅಧಿಕಾರಿಗಳು ಬಡ್ಡಿ ದರ ಹೆಚ್ಚಳವನ್ನು ನಿಲ್ಲಿಸುವುದನ್ನು ಪರಿಗಣಿಸುವ ಮೊದಲು ಹಣದುಬ್ಬರವು ಶೇ. 2ಕ್ಕಿಂತ ಕಡಿಮೆ ಇರಬೇಕೆಂದು ಬಯಸುತ್ತಾರೆ‘ ಎಂದು ಹೇಳಿದರು.

ಉದ್ಯೋಗ ಮಾರುಕಟ್ಟೆಯಲ್ಲಿ ವೇತನ ಏರಿಕೆಯಿಂದಾಗಿ ಹಣದುಬ್ಬರವು ಹೆಚ್ಚಳವಾಗುತ್ತಿದೆ ಎಂದು ಕಂಡುಬಂದಿದೆ. ಬಡ್ಡಿ ದರ ಹೆಚ್ಚಳ ಪ್ರಕ್ರಿಯೆಯು ಆರ್ಥಿಕ ಹಿಂಜರಿತಕ್ಕೆ ಕಾರಣವಾಗುವುದೋ ಇಲ್ಲವೋ ಎಂಬುದು ಗೊತ್ತಿಲ್ಲ. ನಾವು ಎಷ್ಟು ಬೇಗನೆ ಹಣದುಬ್ಬರವನ್ನು ತಗ್ಗಿಸುತ್ತೇವೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದೂ ಅವರು ಹೇಳಿದರು. ಬಡ್ಡಿ ದರ ಏರಿಕೆಯಿಂದಾಗಿ ಕಾಲಾನಂತರ ದಲ್ಲಿ ಉದ್ಯೋಗ ಕಡಿತವಾಗುತ್ತವೆ. ನಿರುದ್ಯೋಗ ಹೆಚ್ಚುತ್ತದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪೂರ್ಣ ಪ್ರಮಾಣದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತದೆ ಎಂದು ಕೆಲ ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಕೆ: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ ಮಾಡಿರುವುದು ಮತ್ತು ಅದು ಹೂಡಿಕೆದಾರರ ಭಾವನೆಗಳ ಮೇಲೆ ಬೀರಿದ ಪರಿಣಾಮವಾಗಿ ಗುರುವಾರ ಡಾಲರ್ ಎದುರು ರೂಪಾಯಿ ಬೆಲೆಯು 90 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿತು. ಸದ್ಯ ಒಂದು ಡಾಲರ್ ಬೆಲೆಯು 80.86 ರೂಪಾಯಿ ಆಗಿದೆ. ಅಮೆರಿಕದ ಫೆಡ್​ರಲ್ ಬ್ಯಾಂಕ್ ದರ ಹೆಚ್ಚಳ ಮತ್ತು ಯೂಕ್ರೇನ್​ನಲ್ಲಿ ಭೌಗೋಳಿಕ ರಾಜಕೀಯ ಅಪಾಯದ ಹೆಚ್ಚಳದ ಮುನ್ಸೂಚನೆ, ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೆರಿಕ ಕರೆನ್ಸಿಯ ಬಲ, ದೇಶೀಯ ಷೇರುಗಳಲ್ಲಿನ ಮೌನ ಪ್ರವೃತ್ತಿ ಮತ್ತು ದೃಢವಾದ ಕಚ್ಚಾ ತೈಲ ಬೆಲೆಗಳು ರೂಪಾಯಿ ಕುಸಿತಕ್ಕೆ ಕಾರಣವಾಯಿತು ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ಹೇಳಿದ್ದಾರೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಸ್ಥಳೀಯ ಕರೆನ್ಸಿಯು ಡಾಲರ್ ಎದುರು 80.27ನಲ್ಲಿ ಪ್ರಾರಂಭವಾಯಿತು, ನಂತರ ಏಕದಿನ ವಹಿವಾಟಿನಲ್ಲಿ ಕನಿಷ್ಠ 80.95ಕ್ಕೆ ಕುಸಿಯಿತು. ಅಂತಿಮವಾಗಿ 80.86ರಲ್ಲಿ ಕೊನೆಗೊಂಡಿತು. ಹಿಂದಿನ ದಿನದಲ್ಲಿ ಇದು 79.96 ಇತ್ತು. ಇದಕ್ಕೆ ಹೋಲಿಸಿದರೆ 90 ಪೈಸೆ ಕುಸಿತವಾಗಿದೆ. ಏತನ್ಮಧ್ಯೆ, ಡಾಲರ್ ಸೂಚ್ಯಂಕವು ಶೇಕಡಾ 0.38 ರಷ್ಟು ಏರಿಕೆಯಾಗಿ 110.06 ಕ್ಕೆ ತಲುಪಿದ್ದು, ಏಷ್ಯಾದ ಇತರ ಕರೆನ್ಸಿಗಳ ಮೌಲ್ಯವೂ ಕುಸಿತಗೊಂಡಿದೆ. ಆರ್ಥಿಕ ಕ್ಷೇತ್ರದಲ್ಲಿ ಬಲವಾದ ದೇಶೀಯ ಮೂಲಭೂತ ಅಂಶಗಳು ಇದ್ದರೂ ರೂಪಾಯಿಯಲ್ಲಿನ ಪ್ರಸ್ತುತ ಕುಸಿತವು ಸ್ವಲ್ಪ ಸಮಯದವರೆಗೆ ಮುಂದುವರಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಷೇರು ಕುಸಿತ: ದೇಶೀಯ ಷೇರು ಮಾರುಕಟ್ಟೆ ಗುರುವಾರ ಕುಸಿತ ಕಂಡಿದೆ. ಸೆನ್ಸೆಕ್ಸ್ 337.06 ಅಂಶ ಅಥವಾ 0.57 ರಷ್ಟು ಕುಸಿದು 59,119.72 ಕ್ಕೆ ಕೊನೆಗೊಂಡಿತು. ನಿಫ್ಟಿ 88.55 ಪಾಯಿಂಟ್ ಅಥವಾ 0.5ರಷ್ಟು ಕುಸಿದು 17,629.80 ಕ್ಕೆ ತಲುಪಿತು.

ಚಿನ್ನ 442 ರೂ. ಏರಿಕೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 442 ರೂ.ಗಳ ಏರಿಕೆ ಕಂಡು 50,399 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಪ್ರತಿ ಕಿಲೋಗ್ರಾಂಗೆ 558 ರೂ.ಗೆ ಏರಿಕೆಯಾಗಿ 58,580 ರೂಪಾಯಿಗೆ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net