

ಶಿವಮೊಗ್ಗ: ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಫೆ.6 ಮತ್ತು 7ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
6ರಂದು ಬೆಳಗ್ಗೆ 10.30ಕ್ಕೆ ಸಮ್ಮೇಳನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸುವರು. ಸರ್ವಾಧ್ಯಕ್ಷ ಡಾ. ಜೆ.ಕೆ.ರಮೇಶ್ ಅವರ ಇಂಡಿಯಾದ ಹೊರಗೊಂದು ಹಣಕು ಕೃತಿ ಹಾಗೂ ಬಿ.ಚಂದ್ರೇಗೌಡ ಅವರ ದೇಶಾಂತರ ಕಾದಂಬರಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬಿಡುಗಡೆಗೊಳಿಸುವರು.
10 ಪುಸ್ತಕ ಹಾಗೂ 12 ವಾಣಿಜ್ಯ ಮಳಿಗೆಗಳು ನಿರ್ಮಿಸಿದ್ದು, ಪೋಲಿಸ್ ಇಲಾಖೆಯಿಂದ ಅಪಘಾತ ಜಾಗೃತಿ, ಅಪರಾಧ ತಡೆ, ಸೈಬರ್ ಅಪರಾಧ ಸೇರಿದ ಮಳಿಗೆ ತೆರೆಯಲಾಗಿದೆ. ಸಮ್ಮೇಳನಕ್ಕೆ ಬರುವ ಅತಿಥಿಗಳು, ಆಹ್ವಾನಿತರು, ಪ್ರತಿನಿಧಿಗಳಿಗೆ ಸುರಭಿ ಕಲ್ಯಾಣ ಮಂದಿರದಲ್ಲಿ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಬೇರೆ ಊರುಗಳಿಂದ ಬರುವ ಅತಿಥಿಗಳು, ಪದಾಧಿಕಾರಿಗಳು, ಪ್ರತಿನಿಧಿಗಳಿಗೆ ನಗರದ ವಿವಿಧ ವಸತಿ ಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ವಸತಿ ಸೇರಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಪ್ರತಿನಿಧಿಯಾಗಲು ಬಯಸುವವರಿಗೆ ಸ್ವಾಗತ ವಿಭಾಗದಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪ್ರತಿನಿಧಿಗಳಾದವರು ತಮ್ಮ ಹಾಜರಾತಿ ಬಗ್ಗೆ ನೋಂದಣಿ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅದೇ ಸ್ಥಳದಲ್ಲಿ ಊಟ, ತಿಂಡಿ ಚೀಟಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ತಿಳಿಸಿದ್ದಾರೆ.