

ಮಾಧ್ವ ಬ್ರಾಹ್ಮಣ ಸಮುದಾಯದ ಆಧ್ಯಾತ್ಮಿಕ ಸ್ಥಳವು ಈ ಗ್ರಾಮಕ್ಕೊಂದು ವಿಶೇಷ ಸ್ಥಾನ ಒದಗಿಸಿದೆ. ಗ್ರಾಮದಲ್ಲಿ ಬ್ರಹ್ಮಣ್ಯತೀರ್ಥರ ಬೃಂದಾವನವಿದ್ದು, ತಪಸ್ವಿಗಳು ಹಾಗೂ ತ್ರಿಕಾಲಜ್ಞಾನಿಗಳು ಆಗಿದ್ದ ಬ್ರಹ್ಮಣತೀರ್ಥರು ಸೂರ್ಯವಂಶಸಭೂತರೆಂಬ ಪ್ರತೀತಿ ಇದೆ. ವಿಜಯನಗರದ ಶ್ರೀಕೃಷ್ಣದೇವರಾಯನ ಸಿಂಹಾಸನಕ್ಕೆ ಒದಗಿದ್ದ ದುರ್ಯೋಗವನ್ನು ದೂರ ಮಾಡಿದ ಹಾಗೂ ವಿಜಯನಗರ ಸಾಮ್ರಾಜ್ಯಕ್ಕೆ ತನ್ನ ತಪಶಕ್ತಿಯನ್ನು ಧಾರೆ ಎರೆದ ಯತಿಗಳಾದ ವ್ಯಾಸರಾಯನು ಈ ಬ್ರಹ್ಮಣ್ಯತೀರ್ಥರ ಶಿಷ್ಯರು ಎಂಬುದು ವಿಶೇಷ.
ಗುರು ವ್ಯಾಸರಾಜರ (ವ್ಯಾಸರಾಯ) ಗುರುವಾಗಿದ್ದ ಬ್ರಹ್ಮಣ್ಯತೀರ್ಥರು ನೂರಾರು ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ಈ ಮಠಕ್ಕೆ ಬೃಂದಾವನ ಮಠ ಎಂಬ ಹೆಸರೂ ಇದೆ. ಈ ಮಠಕ್ಕೆ ಸಂಬಂಧಿಸಿದ ಆಸ್ತಿಯು ಕುಂದಾಪುರ ಬಳಿ ಇರುವುದರಿಂದ ಇದಕ್ಕೂ ಕುಂದಾಪುರ ವ್ಯಾಸರಾಜಮಠ ಎಂತಲೂ ಕರೆಯಲಾಗುತ್ತದೆ.
ಅಬ್ಬೂರಿನವರೇ ಆದ ಬ್ರಹ್ಮಣ್ಯತೀರ್ಥರು ಇಲ್ಲಿ ಜೀವಂತ ಸಮಾಧಿಯಾಗಿರುವ ಬೃಂದಾವನ ಇದೆ. ಅಂದಿನಿಂದ ಇಲ್ಲಿಯವರೆಗೂ ಪೂಜೆ, ಕೈಂಕರ್ಯ ನಡೆಸಿಕೊಂಡು ಬರಲಾಗುತ್ತಿದೆ. ಇದು ಬ್ರಾಹ್ಮಣ ಸಮುದಾಯದರು ಮಾತ್ರ ಪೂಜೆ ಸಲ್ಲಿಸುವ ಸ್ಥಳವಾಗಿರುವುದು ವಿಶೇಷ. ಇನ್ನು ವ್ಯಾಸರಾಜರು ಹುಟ್ಟಿದ್ದು ಬೇರೆ ಕಡೆಯಾದರೂ, ಅವರ ಬಾಲ್ಯ, ಅಕ್ಷರಭ್ಯಾಸ ಎಲ್ಲವೂ ನಡೆದಿದ್ದು ಬ್ರಹ್ಮಣ್ಯತೀರ್ಥರ ಬಳಿ.
ವ್ಯಾಸರಾಜರನ್ನು ಚಿಕ್ಕವಯಸ್ಸಿನಲ್ಲಿಯೇ ಮಠಕ್ಕೆ ಕರೆತಂದ ಬ್ರಹ್ಮಣ್ಯತೀರ್ಥರು ಅವರಿಗೆ ಎಲ್ಲ ವಿದ್ಯೆ ಧಾರೆ ಎರೆದರು. ಬ್ರಹ್ಮಣ್ಯ ತೀರ್ಥರ ಬೃಂದಾವನ ಹಾಗೂ ವ್ಯಾಸರಾಜರ ಮಠಕ್ಕೆ ಸಾಕಷ್ಟು ಇತಿಹಾಸವಿದ್ದು, ಇಲ್ಲಿಗೆ ದಾಸಕೂಟದ ಪ್ರಮುಖ ಕೀರ್ತನಾಕಾರರಾದ ಪುರಂದರದಾಸರು ಸೇರಿ ಹಲವು ದಾಸರು ಆ ಕಾಲದಲ್ಲಿ ವ್ಯಾಸರಾಜರ ಜತೆ ಈ ಮಠಕ್ಕೆ ಭೇಟಿ ನೀಡಿದ್ದಾರೆ.
ಬ್ರಹ್ಮಣ್ಯತೀರ್ಥರ ಸಮಾಧಿಸ್ಥ ಬೃಂದಾವನದ ಜತೆಗೆ, ಅವರ ನಂತರ ತೀರ್ಥರಾಗಿ ಬಂದ ಕೆಲ ಗುರುಗಳ ಸಮಾಧಿಸ್ಥ ಬೃಂದಾವನಗಳಿವೆ. ಈ ಸ್ಥಳದಲ್ಲಿ ಹಲವಾರು ತೀರ್ಥರು ಜೀವಂತ ಸಮಾಧಿಯಾಗಿದ್ದಾರೆ ಎನ್ನುವ ನಂಬಿಕೆಯಿದ್ದು, ಈ ಕಾರಣದಿಂದ ಇದೊಂದು ಇಂದಿಗೂ ಪವಿತ್ರ ಹಾಗೂ ಭಾವುಕ ಪುಣ್ಯಕ್ಷೇತ್ರ ಎನ್ನುತ್ತಾರೆ ಗ್ರಾಮದ ಸ್ವಯಂಸೇವಕ ರಾಜೀವ್ ಮತ್ತು ಶಿವಕುಮಾರ್.
ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಜತೆಗೆ ಹಲವು ಸಮಾಜಗಳು ಸಹಬಾಳ್ವೆ ಕಟ್ಟಿಕೊಂಡಿವೆ. ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚಾರ, ಸಂಪ್ರದಾಯಗಳನ್ನು ಇಲ್ಲಿನ ಜನ ಚಾಚುತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಹ್ಮಣ್ಯತೀರ್ಥರ ಆರಾಧನೆಯ ಗೋಪಾಲಕೃಷ್ಣಸ್ವಾಮಿ, ಶ್ರೀ ನರಸಿಂಹಸ್ವಾಮಿ, ಮಾರಮ್ಮ, ಕೊಲ್ಲಾಪುರದಮ್ಮ ಸೇರಿ ಹಲವು ದೇವತೆಗಳನ್ನು ಪೂಜಿಸಿಕೊಂಡು ಬರತ್ತಿರುವುದು ವಿಶೇಷ.
ಬ್ರಾಹ್ಮಣ್ಯತೀರ್ಥರಿಗಿಂತ ಹಿರಿಯರಾದ ಪುರುಷೋತ್ತಮ ತೀರ್ಥರು ಜೀವಂತವಾಗಿ ಗುಹೆ ಪ್ರವೇಶ ಮಾಡಿರುವ ಹುಲಿಗವಿ ಸ್ಥಳ ಗ್ರಾಮದಲ್ಲಿದೆ. ಇಡೀ ದಕ್ಷಿಣ ಭಾತರದಲ್ಲೇ ಜೀವಂತ ಗುಹೆ ಪ್ರವೇಶದ ಇತಿಹಾಸವಿಲ್ಲ. ಇಂದಿಗೂ ಪುರುಷೋತ್ತಮ ತೀರ್ಥರು ಒಳಗೆ ಜಪ ಮಾಡುತ್ತಿದ್ದಾರೆ ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ತಾಲೂಕಿನಲ್ಲಿ ಅತಿದೊಡ್ಡ ಗುಡ್ಡೆ ಎಂದು ಕರೆಸಿಕೊಳ್ಳುವ ವಿಠ್ಠಲನ ಗುಡ್ಡೆ (ಅಬ್ಬೂರು ಗುಡ್ಡೆ) ಗ್ರಾಮದ ಪ್ರಾಕೃತಿಕ ಆಸ್ತಿಯಾಗಿದೆ. (ಅಪಾರವಾದ ಜೀವರಾಶಿ ಹಾಗೂ ಅಮೂಲ್ಯ ಸಸ್ಯಕಾಶಿ ಇದಾಗಿದೆ), ಜಾಗಟೆ ಕಲ್ಲು ವಾಡೆ ಎಂದು ಹೆಸರು ಪಡೆದಿರುವ ವಿಶೇಷವಾಗಿ ಜಾಗಟೆ ಶಬ್ದ ಬರುವ ಜಾಗಟೆಕಲ್ಲು ಈ ಗ್ರಾಮದಲ್ಲಿದೆ. ವಿಶಿಷ್ಟ ಹಿನ್ನೆಲೆ ಉಳ್ಳ ತೇರಿನ ಕಲ್ಲು, ಏತಾರೆಕಲ್ಲು ಸೇರಿದಂತೆ ಕೆಲ ಶಾಸನಗಳು ಹಾಗೂ ವೀರಗಲ್ಲುಗಳು ಸಹ ಗ್ರಾಮದಲ್ಲಿವೆ. ದಾಸಸಾಹಿತ್ಯಕ್ಕೆ ಹೆಸರಾದ ಶ್ರೀಪಾದರಾಜರು ಹುಟ್ಟಿದ ಪುಣ್ಯಸ್ಥಳ ಎಂಬುದು ಮತ್ತೊಂದು ವಿಶೇಷ.
ತಾಲೂಕಿನ ಪ್ರಸಿದ್ಧ ಕಣ್ವಜಲಾಶಯಕ್ಕೂ ಮುನ್ನ, ಕಣ್ವ ನದಿಗೆ ಪ್ರಪ್ರಥಮವಾಗಿ ಅಡ್ಡಲಾಗಿ ಕಟ್ಟಲಾದ ಅಣೆಕಟ್ಟು ಈ ಗ್ರಾಮದಲ್ಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ಐತಿಹಾಸಿಕ ಹಿನ್ನೆಲೆಯುಳ್ಳ ಡ್ಯಾಮ್ ಇದಾಗಿದೆ. ಕಣ್ವ ಹೊಳೆಯು ಮಾಗಡಿ ತಾಲೂಕಿನಲ್ಲಿ ಹುಟ್ಟಿ ಚನ್ನಪಟ್ಟಣ ತಾಲೂಕಿನಲ್ಲಿ ಹರಿದು ಕಾವೇರಿ ಹೊಳೆಗೆ ಉಪ ನದಿಯಾಗಿ ಸೇರುತ್ತದೆ. ಆದರೆ, ಅಬ್ಬೂರು ಗ್ರಾಮದ ವಾಯುವ್ಯ ಗಡಿ ಭಾಗದಲ್ಲಿ ಸುಂದರವಾದ ಅಣೆಕಟ್ಟೆಯನ್ನು 1891ರಲ್ಲೇ ನಿರ್ಮಿಸಲಾಗಿದೆ. ಕಣ್ವ ನದಿಗೆ ಸರ್ ಎಂ.ವಿಶ್ವೇಶ್ವರಯ್ಯ ಅವರು 1946 ರಲ್ಲಿ ಸ್ವಯಂ ಚಾಲಿತ ಸೈಫನ್ (ಅಣೆಕಟ್ಟು) ನಿರ್ಮಿಸಿದ್ದರು. ಇದು ನಿರ್ಮಾಣವಾಗುವ 55 ವರ್ಷಗಳ ಹಿಂದೆಯೇ ಅಬ್ಬೂರು ಗ್ರಾಮದಲ್ಲಿ ಈ ಅಣೆಕಟ್ಟೆಯನ್ನು ನಿರ್ಮಿಸಿರುವುದು ವಿಶೇಷ.
ಹತ್ತು ಹಲವು ವಿಶೇಷತೆ ಹೊಂದಿರುವ ಗ್ರಾಮವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಚನ್ನಪಟ್ಟಣ ಗಾಂಧಿ ಎಂದೇ ಹೆಸರಾಗಿದ್ದ ದಿ.ಅಬ್ಬೂರು ಗೋಪಣ್ಣ, ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಮೂರ್ತಿ, ಬಮುಲ್ ಮಾಜಿ ಅಧ್ಯಕ್ಷ ದಿ.ಎ.ಆರ್.ರಾಜು, ಕೇಂದ್ರ ನಾಟಕ ಅಕಾಡೆಮಿ ಪುರಸ್ಕೃತ ಅಬ್ಬೂರು ಜಯತೀರ್ಥ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ, ಚಿಂತಕ ಅಬ್ಬೂರು ಪ್ರಕಾಶ್, ಯುವಕವಿ, ಜಾನಪದ ಆಸಕ್ತ ಅಬ್ಬೂರು ಶ್ರೀನಿವಾಸ್ ಸೇರಿದಂತೆ ಹಲವು ಸಾಧಕರು ಗ್ರಾಮದ ಕೀರ್ತಿ ಬೆಳಗಿಸಿದ್ದಾರೆ.
ತಾಲೂಕಿನ ಅಬ್ಬೂರು ಪ್ರಾಚೀನ ಹಾಗೂ ಸಾಕಷ್ಟು ಪ್ರಾವಿತ್ರ್ಯತೆ ಹೊಂದಿರುವ ಗ್ರಾಮವಾಗಿದ್ದು, ಈ ಭಾಗ ಕಣ್ವ ಮಹರ್ಷಿಗಳ ತಪೋನಾಡು ಎಂಬ ಹೆಗ್ಗಳಿಕೆ ಹೊಂದಿದೆ. ಜತೆಗೆ, ಚನ್ನಪಟ್ಟಣ ತಾಲೂಕಿಗೆ ಜ್ಞಾನ ಮಂಟಪ ಕ್ಷೇತ್ರ ಎಂಬ ಹೆಸರು ಬರಲು ಸಹ ಅಬ್ಬೂರು ಕ್ಷೇತ್ರವೇ ಕಾರಣ ಎಂಬುದನ್ನು ಹಿರಿಯರು ಸ್ಮರಿಸುತ್ತಾರೆ.