ಸರ್ಕಾರಿ ಕೆಲಸ ಕಳೆದುಕೊಳ್ಳುವ ಭಯ; ನಾಲ್ಕನೆಯ ನವಜಾತ ಶಿಶುವನ್ನು ಕಾಡಿನಲ್ಲಿ ಎಸೆದ ಶಿಕ್ಷಕ ದಂಪತಿ| Parents

Untitled design - 2025-10-02T124750.366
Published on

Parents: ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆತ್ತರೆ ಸರ್ಕಾರಿ ಕೆಲಸ ಕಳೆದುಕೊಳ್ಳಬೇಕಾಗುತ್ತೆ ಎಂಬ ಭಯದಲ್ಲಿ ಶಿಕ್ಷಕ ದಂಪತಿಯೊಬ್ಬರು ತಮ್ಮ ನಾಲ್ಕನೇ ನವಜಾತ ಶಿಶುವನ್ನು ಕಾಡಿನಲ್ಲಿ ಎಸೆದ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ನವಜಾತ ಶಿಶು ಬದುಕುಳಿದಿದೆ ಎಂದು ಗುರುವಾರ(ಅ. 02) ವರದಿಯಾಗಿದೆ.

ಚಿಂದ್ವಾರ ಜಿಲ್ಲೆಯ ನಂದನವಾಡಿ ಗ್ರಾಮದಲ್ಲಿ ಸೆಪ್ಟೆಂಬರ್ 23ರಂದು ಈ ಘಟನೆ ನಡೆದಿದೆ. 72 ಗಂಟೆಗಳ ಕಾಲನ ನವಜಾತ ಶಿಶು ಹಾಲು ಇಲ್ಲದೇ ಕಾಡಿನ ಬಂಡೆಯಡಿ ಸಿಲುಕಿ ಕಿರುಚುತ್ತ ಬದುಕುಳಿದಿದೆ. ಮಗು ಅಳುವ ಶಬ್ದವನ್ನು ಕೇಳಿ ಗ್ರಾಮಸ್ಥರು ಶಿಶುವನ್ನು ಪತ್ತೆ ಹಚ್ಚಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ಸಹಾಯದಿಂದ ಮಗುವನ್ನು ಬಯಲಿಗೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನವಜಾತ ಶಿಶುವನ್ನು ಕಾಡಿನಲ್ಲಿ ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಿಕ್ಷಕರಾಗಿರುವ ಬಬ್ಲು ದಾಂಡೋಲಿಯಾ ಮತ್ತು ರಾಜಕುಮಾರಿ ದಾಂಡೋಲಿಯಾ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 93ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ದಂಪತಿ ಸರ್ಕಾರಿ ಕೆಲಸ ಕಳೆದುಕೊಳ್ಳುವ ಭಯದಿಂದ ಈಗಾಗಲೇ ಮೂರು ಮಕ್ಕಳಿದ್ದು, ನಾಲ್ಕನೇ ಮಗುವಾದ್ರೆ ಕೆಲಸ ಹೋಗುತ್ತದೆ ಎಂದು ಗರ್ಭಧಾರಣೆಯನ್ನು ರಹಸ್ಯವಾಗಿಟ್ಟಿದ್ದರು. ಸೆಪ್ಟೆಂಬರ್ 23ರ ಬೆಳಗಿನ ಜಾವ ರಾಜಕುಮಾರಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು, ಕೆಲವೇ ಗಂಟೆಗಳಲ್ಲಿ ಶಿಶುವನ್ನು ಕಾಡಿಗೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ ಎಂದು ಹೇಳಿದ್ದಾರೆ.

ಚಿಂದ್ವಾರ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಮಕ್ಕಳ ವೈದ್ಯರು ಚಿಕಿತ್ಸೆ ನೀಡಿದ್ದು, ಮೂರು ದಿನಗಳ ಕಾಲ ಮಗು ಕಾಡಿನಲ್ಲಿದ್ದಾಗ ಇರುವೆ ಕಡಿತ, ಲಘೋಷ್ಣತೆಯ ಲಕ್ಷಣಗಳು ಕಂಡು ಬಂದಿವೆ ಎಂದು ಹೇಳಿದ್ದಾರೆ. ಇಷ್ಟಾದರೂ 72 ಗಂಟೆಗಳ ಶಿಶು ಆ ಸ್ಥಿತಿಯಲ್ಲಿ ಮಗು ಬದುಕುಳಿದಿದ್ದು ಪವಾಡಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net