ಫ್ಯಾಟಿ ಲಿವರ್ ಉದಾಸೀನ ಮಾಡಿದರೆ ಸಮಸ್ಯೆ ಗಂಭೀರ

-67bb5e394533d
Published on
‘ನಾನು ಸಾರಾಯಿ ಕುಡಿಯುವುದಿಲ್ಲ; ಹಾಗಾಗಿ ನನ್ನ ಲಿವರ್ ಹಾಳಾಗಲು ಸಾಧ್ಯವಿಲ್ಲ’ ಎಂಬ ಕಲ್ಪನೆಯಲ್ಲಿ ತುಂಬಾ ಜನ ಇರುತ್ತಾರೆ. ಆದರೆ ಯಾವುದೊ ಕಾರಣಕ್ಕೆ ಹೊಟ್ಟೆಯ ಸ್ಕಾ್ಯನಿಂಗ್ ಮಾಡಿದಾಗ ರಿಪೊರ್ಟ್​ನಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಇದೆ ಎಂದು ಬರೆದಿರುತ್ತದೆ. ಇದಕ್ಕೆ ಗಾಬರಿಯಾಗುವುದನ್ನು ಬಿಟ್ಟು ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿರುವ ಫ್ಯಾಟಿ ಲಿವರ್ ಸಮಸ್ಯೆ ದೊಡ್ಡ ತೊಂದರೆ ಅಲ್ಲದೇ ಹೊದರೂ ಉದಾಸೀನ ಮಾಡಿದರೆ ಮುಂದೆ ಇದು ಗಂಭೀರ ಸಮಸ್ಯೆಯಾಗಿ ಕಾಡಬಹುದು. ಹಾಗಾಗಿ ಇಂದು ನಾವು ಫ್ಯಾಟಿ ಲಿವರ್​ನ ಕಾರಣಗಳು, ಲಕ್ಷಣಗಳು ಮತ್ತು ಗುಣಪಡಿಸಿಕೊಳ್ಳುವುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳೋಣ.

ಈ ಸಮಸ್ಯೆ ಬರಲು ಮುಖ್ಯವಾಗಿ ಮದ್ಯಪಾನ, ಬೊಜ್ಜು, ಮಧುಮೇಹ, ಕೆಲವು ಮಾತ್ರೆಗಳ ಅಡ್ಡಪರಿಣಾಮ, ಅತಿಯಾಗಿ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆ, ಕರಿದ ಪದಾರ್ಥಗಳ ಸೇವನೆ ಮುಂತಾದವು ಕಾರಣವಾಗಿರುತ್ತವೆ. ಈ ಸಮಸ್ಯೆಯನ್ನು ವಿಶೇಷವಾಗಿ ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಮೊದಲನೆಯದು ಮದ್ಯಪಾನದ ಕಾರಣದಿಂದ ಉಂಟಾಗಿರುವುದು; ಎರಡನೆಯದು ಮದ್ಯಪಾನ ಕಾರಣವಲ್ಲದ್ದು. ಮೊದಲನೆಯ ವಿಧದಲ್ಲಿ ಮದ್ಯಪಾನವನ್ನು ವರ್ಜಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ. ಇದರಿಂದಲೇ ಅರ್ಧ ಸಮಸ್ಯೆ ಸರಿಯಾಗುತ್ತದೆ. ಇನ್ನು ಎರಡನೆಯ ವಿಧದಲ್ಲಿ ತೂಕ ಇಳಿಸಿಕೊಳ್ಳುವುದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹತೋಟಿಯಲ್ಲಿಡುವುದು, ಜಂಕ್​ಫುಡ್ ಮತ್ತು ಕೆಟ್ಟ ಕೊಬ್ಬುಗಳನ್ನು ತ್ಯಜಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇತ್ತೀಚೆಗೆ ಫ್ಯಾಟಿ ಲಿವರ್ ಸಮಸ್ಯೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುತ್ತಿರಲು ಮುಖ್ಯ ಕಾರಣವೆಂದರೆ ಕಾರ್ಬೆಹೈಡ್ರೇಟ್​ಗಳ (ಏಕದಳ ಧಾನ್ಯಗಳ)ಅತಿಯಾದ ಸೇವನೆ. ಸಕ್ಕರೆ, ಬೀದಿ ಬದಿಯ ತಿನಿಸುಗಳು ಹಾಗೂ ಏಕದಳ ಧಾನ್ಯಗಳಲ್ಲಿ ಗ್ಲುಕೋಸಿನ ಪ್ರಮಾಣ ಹೆಚ್ಚಿರುತ್ತದೆ. ಹೆಚ್ಚಾದ ಈ ಗ್ಲುಕೋಸ್ ಅನ್ನು ಅವಶ್ಯಕತೆ ಬಿದ್ದಾಗ ಅಂದರೆ ಊಟವಿಲ್ಲದಂತಹ ಪರಿಸ್ಥಿತಿ ಬಂದಾಗ ಬೇಕಾಗುತ್ತದೆ ಎಂಬ ಕಾರಣಕ್ಕೆ ಲಿವರ್ ತನ್ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಆದಿಮಾನವರಂತೆ ನಾವು ಎಂದಿಗೂ ಉಪವಾಸ ಬೀಳದಿರುವ ಕಾರಣ ಇದು ಅಲ್ಲಿಯೆ ಉಳಿದು ಫ್ಯಾಟಿ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಇಂತಹ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ ಪೊ›ಟೀನ್, ಒಳ್ಳೆಯ ಕೊಬ್ಬು ಮತ್ತು ನಾರಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಸುಲಭ ಮನೆಮದ್ದು: ಕೆಲವು ಸುಲಭವಾದ ಮತ್ತು ತುಂಬಾ ಪರಿಣಾಮಕಾರಿಯಾದ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ನಿತ್ಯವೂ ಮೂರರಿಂದ ನಾಲ್ಕು ಗ್ರಾಂನಷ್ಟು ನೆಲನೆಲ್ಲಿಯ ಗಿಡವನ್ನು ಅಗಿದು ರಸ ನುಂಗಬೇಕು. ಹಸಿ ಗಿಡ ಸಿಗದೇ ಹೋದರೆ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುವ ನೆಲನೆಲ್ಲಿ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ 2 ಲೋಟ ನೀರು ಹಾಕಿ ಅರ್ಧ ಲೋಟಕ್ಕೆ ಬತ್ತಿಸಿ ಕೆಲದಿನಗಳ ಕಾಲ ದಿನಕ್ಕೊಮ್ಮೆ ಸೇವಿಸಬೇಕು.

ಫ್ಯಾಟಿ ಲಿವರ್ ಜೊತೆ ಬೊಜ್ಜಿನ ಸಮಸ್ಯೆ ಇದ್ದರೆ ಅರ್ಧ ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ತ್ರಿಫಲ ಚೂರ್ಣ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ 4 ಚಿಟಿಕೆಯಷ್ಟು ಹಿಪ್ಪಲಿ ಪುಡಿಗೆ ಸ್ವಲ್ಪ ಜೇನುತುಪ್ಪ ಹಾಕಿ ದಿನಕ್ಕೆ ಎರಡು ಬಾರಿ ಆಹಾರದ ಮೊದಲು ನೆಕ್ಕುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

ಉಪವಾಸ ತುಂಬಾ ಅದ್ಭುತ ಚಿಕಿತ್ಸೆಯಾಗಿ ಫ್ಯಾಟಿ ಲಿವರ್ ಸಮಸ್ಯೆಯನ್ನು ಗುಣಪಡಿಸುತ್ತದೆ. ಸಮಸ್ಯೆ ಜಾಸ್ತಿಯಾಗಿದ್ದರೆ ಪ್ರಕೃತಿ ಚಿಕಿತ್ಸೆ, ವಿರೇಚನ ಮುಂತಾದ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ದಿನಕ್ಕೆ ಒಂದು ಬಾರಿಯಾದರೂ ಏಕದಳ ಧಾನ್ಯದ ಸೇವನೆ ಬಿಟ್ಟು ಬೇಳೆ, ಕಾಳು, ಸೊಪ್ಪು, ತರಕಾರಿ, ಹಣ್ಣುಗಳು, ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದ ಎಣ್ಣೆ ಮುಂತಾದವುಗಳನ್ನು ಸೇವಿಸಬೇಕು.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net