ಮಗಳ ಕೊಂದ ತಂದೆಗೆ ಜೀವಾವಧಿ ಶಿಕ್ಷೆ; 2ನೇ ಮದುವೆಯಾದ ವ್ಯಕ್ತಿಯಿಂದ ಕೃತ್ಯ!

Court
Published on

ಬೆಂಗಳೂರು: ಮೊದಲ ಪತ್ನಿಯ ಮಗಳನ್ನು ಕೊಲೆ ಮಾಡಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ 51ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ರಸ್ತೆ ಆವಲಹಳ್ಳಿಯ ನಿವಾಸಿ ಸತ್ಯನಾರಾಯಣ ಸಿಂಗ್ ಶಿಕ್ಷೆಗೆ ಒಳಗಾದ ಅಪರಾಧಿ. 7 ವರ್ಷದ ಮಗಳನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಿ.ಬಿ. ಸಂತೋಷ್, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಸತ್ಯನಾರಾಯಣ ಸಿಂಗ್, 2005ರಲ್ಲಿ ಆಶಾ ಎಂಬಾಕೆಯನ್ನು ಮದುವೆ ಆಗಿದ್ದ. ಪತಿಯ ವರದಕ್ಷಿಣೆ ಕಿರುಕುಳದಿಂದ ನೊಂದು ಆಶಾ, 2006ರ ಡಿ.12ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆಗಾಗಲೇ ದಂಪತಿಗೆ ಆಶಾಗೆ 8 ತಿಂಗಳ ಪುತ್ರಿ ನೇಹಾಸಿಂಗ್ ಇದ್ದಳು. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಜೆ.ಜೆ.ನಗರ ಪೊಲೀಸರು, ಅಪರಾಧಿ ಸತ್ಯನಾರಾಯಣ ಸಿಂಗ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತ ಮಗುವನ್ನು, ಆಶಾಳ ಪಾಲಕರು ಕರೆದೊಯ್ದು ಶಿವಮೊಗ್ಗದಲ್ಲಿ ಸಾಕುತ್ತಿದ್ದರು. ಜೈಲಿನಿಂದ ಹೊರಬಂದ ಮೇಲೆ ಸತ್ಯನಾರಾಯಣ ಸಿಂಗ್, ಅತ್ತೆ ಮನೆಗೆ ಹೋಗಿ ಮಗಳನ್ನು ಚೆನ್ನಾಗಿ ಸಾಕುವುದಾಗಿ ನಂಬಿಸಿ ಬೆಂಗಳೂರಿಗೆ ಕರೆತರುತ್ತಾನೆ.

2ನೇ ಪತ್ನಿ ಮತ್ತು ತಾಯಿ ಜತೆಗೆ ನೆಲೆಸಿದ್ದ. 2013ರಲ್ಲಿ ರಾತ್ರಿ ಪಾಚೆ ಮೇಲೆ ಮಲಗಿದ್ದ ಮಗಳನ್ನು ದೋಣ್ಣೆಯಿಂದ ಹಲ್ಲೆ ನಡೆಸುತ್ತಾನೆ. ಇದನ್ನೆ 2ನೇ ಪತ್ನಿ ಕುಮ್ಮಕ್ಕು ಕೊಡುತ್ತಾನೆ. ಈ ಬಗ್ಗೆ ತನಿಖೆ ಕೈಗೊಂಡ ಬ್ಯಾಟರಾಯನಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್‌ಗಳಾದ ಟಿ. ಕೋದಂಡರಾಮ್ ಮತ್ತು ಕೆ.ಪಿ.ಸತ್ಯನಾರಾಯಣ ನೇತೃತ್ವದ ತಂಡ ತನಿಖೆ ನಡೆಸಿ ಸತ್ಯನಾರಾಯಣ ಸಿಂಗ್ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net