ಮಾತು ಒಪ್ಪದ ಮಗ ಏಕೆ... ಪುತ್ರನನ್ನೇ ಗುಂಡಿಕ್ಕಿ ಹತ್ಯೆಗೈದ ಪಾಪಿ ತಂದೆ; ಪತ್ನಿ ಕಣ್ಣೀರು | Son Dead

ವಿಜಯವಾಣಿ - 2025-03-11T162825.373 (1)
Published on

Son Dead: ತನ್ನ ಮಾತಿಗೆ ಒಪ್ಪಿಗೆ ಸೂಚಿಸದ ಮಗ ನನಗೆ ಬೇಡವೇ ಬೇಡ ಎಂದು ಆತನನ್ನು ಗುಂಡಿಟ್ಟು ಹತ್ಯೆಗೈದ ಪಾಪಿ ತಂದೆ, ತಾನೇ ಕೊಲೆ ಮಾಡಿದೆ ಎಂಬ ಕಿಂಚಿತ್ತು ಪಶ್ಚಾತಾಪವಿಲ್ಲದೆ ಜೈಲುಪಾಲಾದ ಘಟನೆ ಗುಜರಾತ್​ನಲ್ಲಿ ವರದಿಯಾಗಿದೆ.

ಗುಜರಾತ್​ನ ರಾಜ್‌ಕೋಟ್‌ನ ಜಸ್ದಾನ್‌ನಲ್ಲಿ ಮಗನೊಂದಿಗೆ ವಾಸವಿದ್ದ ವೃದ್ಧ (80) ಎರಡನೇ ಮದುವೆ ಮಾಡಿಕೊಳ್ಳುವ ವಿಚಾರವನ್ನು ಮಗನೊಂದಿಗೆ ಪ್ರಸ್ತಾಪಿಸಿದ್ದರು. ಆದರೆ, ಇದಕ್ಕೆ ಆತ ಒಪ್ಪಿಗೆ ಸೂಚಿಸದ ಹಿನ್ನೆಲೆ ನನ್ನ ಮಾತನ್ನು ಧಿಕ್ಕರಿಸಿದ ಪುತ್ರ ನನಗೆ ಬೇಡವೇ ಬೇಡ ಎಂದು ಮಗನನ್ನು ಗುಂಡಿಟ್ಟು ಕೊಂದಿರುವ ತಂದೆ ಸದ್ಯ ಖಾಕಿ ವಶದಲ್ಲಿದ್ದಾರೆ.

ಆರೋಪಿಯನ್ನು ರಾಂಭಾಯಿ ಬೋರಿಚಾ ಎಂದು ಗುರುತಿಸಲಾಗಿದೆ. ಉಪ ಎಸ್‌ಪಿ ಕೆಜಿ ಜಲಾ ನೀಡಿದ ಮಾಹಿತಿ ಪ್ರಕಾರ, "ಸೋಮವಾರ (ಮಾ.10) ತಂದೆ ಮಗನ ನಡುವೆ ಎರಡನೇ ಮದುವೆ ವಿಚಾರಕ್ಕೆ ಜಗಳ ಭುಗಿಲೆದ್ದಿತು. 80ನೇ ವಯಸ್ಸಿನಲ್ಲಿ ತಾನು ಎರಡನೇ ಮದುವೆಯಾಗುವುದಾಗಿ ಹಠ ಹಿಡಿದು ಕುಳಿತಿದ್ದ ತಂದೆಗೆ, ಮಗ ಮದುವೆ ಬೇಡ ಎಂದು ಬುದ್ಧಿವಾದ ಹೇಳಿದ್ದ. ಹಲವಾರು ದಿನಗಳಿಂದ ಇದೊಂದು ವಿಚಾರಕ್ಕೆ ತಂದೆ-ಮಗನ ನಡುವೆ ವಿಪರೀತ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ಎರಡನೇ ಮದುವೆ ಆಸೆಗೆ ನೀನು ಅಡ್ಡಿಯಾದರೆ ನಿನ್ನನ್ನು ಹತ್ಯೆಗೈಯುವೆ ಎಂದು ತಂದೆ ಬೆದರಿಕೆ ಕೂಡ ಹಾಕಿದ್ದರು. ಅಂತೆಯೇ ಕಡೆಗೂ ಮಗನನ್ನು ಗುಂಡಿಟ್ಟು ಕೊಂದಿದ್ದಾನೆ" ಎಂದು ಹೇಳಿದರು.

ಆರಂಭದಲ್ಲಿ, ಇದು ಭೂ ವಿವಾದಕ್ಕೆ ನಡೆದ ಕೊಲೆ ಎಂದು ನಂಬಲಾಗಿತ್ತು. ಆದರೆ, ಮೃತ ವ್ಯಕ್ತಿಯ ಪತ್ನಿ ನೀಡಿದ ದೂರಿನ ನಂತರ ಇದೊಂದು ಉದ್ದೇಶಪೂರ್ವಕ ಕೊಲೆ ಎಂಬುದು ಸ್ಪಷ್ಟವಾಗಿದೆ. 20 ವರ್ಷಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದ ರಾಂಭಾಯಿ, 80ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಲು ಬಯಸಿದ್ದರು. ಇದನ್ನು ಮಗನೊಂದಿಗೆ ಹಂಚಿಕೊಂಡಿದ್ದರು. ಆದರೆ, ಮಗ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಬದಲಿಗೆ ಬೇಡ ಎಂದು ಧಿಕ್ಕರಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ತಂದೆಯ ಗುಂಡೇಟಿಗೆ ಬಲಿಯಾದ ಮಗನ ಪತ್ನಿ ಜಯಾಬೆನ್ ಅವರು ನೀಡಿದ ದೂರಿನ ಅನ್ವಯ ಪೊಲೀಸರು ರಾಂಭಾಯಿ ಬೋರಿಚಾನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net