ಹಣದ ಆಸೆಗೆ ನರ್ಸ್​ ಜೊತೆ ಸೇರಿ 25,000 ರೂ.ಗೆ ಮಗಳನ್ನೇ ಮಾರಿದ ತಂದೆ | Father

Father
Published on

Father: ಹಣದ ದುರಾಸೆಗಾಗಿ ನರ್ಸ್ ಜೊತೆ ಸೇರಿ ತನ್ನ ಎರಡೂವರೆ ವರ್ಷದ ಮಗಳನ್ನು ಮಾರಾಟ ಮಾಡಿದ ತಂದೆ ಹಾಗೂ ನರ್ಸ್​ನ್ನು ಪೊಲೀಸರು ಬಂಧಿಸಿದ ಘಟನೆ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾ ನಗರದ ಮಲ್ಸಲ್ಮಿ ಪೊಲೀಸ್ ಠಾಣೆ ವ್ಯಾಪ್ತಿಯ ಭೈಸಾನಿ ಟೋಲಾ ಪ್ರದೇಶದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಭಾನುವಾರ (ಮೇ. 25) ಭೈಸಾನಿ ಟೋಲಾ ನಿವಾಸಿ ಖುಷ್ಬೂ ಕುಮಾರಿ ಅವರು ತಮ್ಮ ಪತಿ ಸೋನು ಯಾದವ್ ಮತ್ತು ದಾನಾಪುರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿರುವ ನರ್ಸ್ ರೂಪಾ ದೇವಿ ಅವರ ವಿರುದ್ಧ ಮಕ್ಕಳ ಕಳ್ಳತನದ ಆರೋಪದಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕ್ರಮ ಕೈಗೊಂಡ ಪೊಲೀಸರು ಸೋನು ಯಾದವ್ ಮತ್ತು ನರ್ಸ್ ರೂಪಾ ದೇವಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಾಲಕಿಯನ್ನು ಖರೀದಿಸಿದ ಪಂಕಜ್ ಕುಮಾರ್ ಮತ್ತು ಪೂಜಿ ದೇವಿ ಎಂಬ ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ. ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಣದ ಆಸೆಗಾಗಿ ಸೋನು ಯಾದವ್ ನರ್ಸ್ ಜೊತೆ ಸೇರಿ ತನ್ನ ಮಗಳನ್ನು ಸರನ್ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗಳಿಗೆ ಕೇವಲ 25,000 ರೂ.ಗೆ ಮಾರಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ, ತಂದೆ ಸೋನು ಮತ್ತು ನರ್ಸ್ ರೂಪಾ ಜೊತೆಗೆ ಬಾಲಕಿಯನ್ನು ಖರೀದಿಸಿದ ದಂಪತಿಯನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯನ್ನು ದಂಪತಿಗಳ ಮನೆಯಿಂದ ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net