ಮಾಸ್ಕ್‌ ಧರಿಸದ್ದಕ್ಕೆ ಬುದ್ಧಿಮಾಂದ್ಯ ಮಗನನ್ನು ಕೊಂದ ತಂದೆ!

murder1
Published on

ಕೋಲ್ಕತಾ: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದು ಇಂದಿನ ಅಗತ್ಯವಾಗಿದೆ ಎನ್ನುವುದು ನಿಜ. ಆದರೆ ಇಲ್ಲೊಬ್ಬ ತಂದೆ, ತನ್ನ ಬುದ್ಧಿಮಾಂದ್ಯ ಮಗ ಮಾಸ್ಕ್‌ ಧರಿಸಲು ಒಪ್ಪುತ್ತಿಲ್ಲ ಎನ್ನುವ ಕಾರಣಕ್ಕೆ ನಿನ್ನೆ ರಾತ್ರಿ ಅವನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಕೋಲ್ಕತಾದ ಬನ್ಸೀಧರ ಮಲ್ಲಿಕ್‌ ಎಂಬ ವೃದ್ಧ ತನ್ನ ಮಗ 45 ವರ್ಷದ ಶೀರ್ಷೆಂದ್‌ ಮಲ್ಲಿಕ್‌ನನ್ನು ಕೊಲೆ ಮಾಡಿ ನಂತರ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ‘ಅಗತ್ಯ ವಸ್ತುಗಳನ್ನು ತರಲೆಂದು ಮನೆಯಿಂದ ಹೊರಗೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಬುದ್ಧಿಮಾಂದ್ಯ ಮಗನನ್ನು ಕರೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಈಗಿನ ನಿಯಮದ ಪ್ರಕಾರ, ಹೊರಗೆ ಹೋಗುವಾಗ ಮಾಸ್ಕ್‌ ಧರಿಸಲೇಬೇಕು. ಆದರೆ ನನ್ನ ಮಗ ಪ್ರತಿಬಾರಿಯೂ ಮಾಸ್ಕ್‌ ಧರಿಸುವುದಿಲ್ಲ ಎಂದು ಹಠ ಮಾಡುತ್ತಿದ್ದ. ಆದ್ದರಿಂದ ಅವನ ಹಿಂಸೆ ತಾಳದೇ ಕತ್ತುಹಿಸುಕಿ ಕೊಲೆ ಮಾಡಿದ್ದೇನೆ’ ಎಂದು ಪೊಲೀಸರಿಗೆ ವೃದ್ಧ ತಿಳಿಸಿದ್ದಾನೆ.

ನಂತರ ಪೊಲೀಸರು ಅಕ್ಕಪಕ್ಕದವರನ್ನು ವಿಚಾರಿಸಿದಾಗ, ಆರೋಪಿ ತನ್ನ ಮಗನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಲಿಲ್ಲ ಎಂಬ ವಿಷಯ ತಿಳಿದಿದೆ. ಅಷ್ಟೇ ಅಲ್ಲದೇ, ಮಗ ಚಿಕ್ಕಂದಿನಿಂದಲೂ ಬುದ್ಧಿಮಾಂದ್ಯನಾಗಿರುವ ಕಾರಣ, ಅವನನ್ನು ಸಾಕುವುದು ಅಪ್ಪನಿಗೆ ದೊಡ್ಡ ಹೊರೆಯಾಗಿತ್ತು. ಖಾಸಗಿ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿರುವ ವೃದ್ಧ, ಮಗ ಕೆಲಸ ಮಾಡಲು ಶಕ್ಯನಲ್ಲದ ಕಾರಣ, ಹಣದ ವಿಷಯವಾಗಿ ಜಗಳವಾಡುತ್ತಿದ್ದ ಎಂದು ಹೇಳಿದ್ದಾರೆ.

ಆದರೆ ಕಳೆದ ಕೆಲವು ದಿನಗಳಿಂದ ಮಾಸ್ಕ್ ಧರಿಸುವ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ಆಗುತ್ತಿರುವ ವಿಷಯವೂ ಪೊಲೀಸರಿಗೆ ತಿಳಿದಿದೆ. ನಿನ್ನೆ ಸಂಜೆ ಇದೇ ವಿಷಯವಾಗಿ ಬಹು ದೊಡ್ಡ ಜಗಳವಾಗಿತ್ತು. ಆಗ ಮಗನನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ ಪೊಲೀಸರು. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net