

Father Elopes: ಇತ್ತೀಚೆಗಷ್ಟೇ ಬಾ ನಲ್ಲ ಮಧುಚಂದ್ರಕೆ ಎಂದು ಮದುವೆಯಾಗಿ 11 ದಿನಕ್ಕೆ ಪತಿಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಮಹಿಳೆ ಸೋನಮ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ದಾಂಪತ್ಯದ ಹೆಸರಿನಲ್ಲಿ ಮತ್ತೊಬ್ಬರ ಕತ್ತು ಸೀಳುವಂತ ಕೆಲಸ ಮಾಡುವುದೇಕೆ? ಎಂಬ ಬೇಸರ ಹಲವರಲ್ಲಿ ಕಾಡುತ್ತಿದೆ. ಇಂಥಾ ಪ್ರಕರಣಗಳು ಮುಂದೆಂದೂ ಮರುಕಳಿಸದಿರಲಿ ಎಂದು ಯೋಚಿಸುವಾಗಲೇ ಇನ್ನೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಆರು ಮಕ್ಕಳ ತಂದೆಯೊಬ್ಬ ತನ್ನ ಕಿರಿಯ ಮಗನಿಗೆ ನಿಶ್ಚಯಿಸಿದ್ದ ವಧು ಜೊತೆಗೆ ಲವ್ವಿಡವ್ವಿ ನಡೆಸಿದ್ದಲ್ಲದೇ, ಮನೆಯವರಿಗೆ ಗೊತ್ತಾಯಿತೆಂದು ಹೆಂಡತಿ ಮತ್ತು ಮಗನಿಗೆ ಹಿಗ್ಗಾಮುಗ್ಗಾ ಥಳಿಸಿ, ಆಕೆಯೊಂದಿಗೆ ಪರಾರಿಯಾದ ಘಟನೆ ಸದ್ಯ ಪೊಲೀಸರ ನಿದ್ದೆಗೆಡಿಸಿದೆ. ಈ ಘಟನೆ ಉತ್ತರಪ್ರದೇಶದ ರಾಮ್ಪುರದಲ್ಲಿ ವರದಿಯಾಗಿದ್ದು, ತಂದೆ ಎನಿಸಿಕೊಂಡ ಭಂಡನ ಹೆಸರು ಶಕೀಲ್ ಎಂದು ಹೇಳಲಾಗಿದೆ. ಕಿರಿಯ ಮಗನಿಗೆ ನಿಶ್ಚಯಗೊಂಡಿದ್ದ ಯುವತಿಯ ಮೇಲೆ ಆಸೆಯಿಟ್ಟ ಶಕೀಲ್, ತಮ್ಮ ಮನೆಗೆ ಆಗಾಗ್ಗೆ ಬರುತ್ತಿದ್ದ ವಧುವನ್ನು ಮಾತನಾಡಿಸುತ್ತ, ಆಕೆಯೊಂದಿಗೆ ಸಂಪರ್ಕ ಬೆಳಿಸಿಕೊಂಡಿದ್ದ ಎಂದು ವರದಿ ಉಲ್ಲೇಖಿಸಿದೆ.
ಮಗ ಮದುವೆ ಆಗಬೇಕಿದ್ದ ಯುವತಿ ಜೊತೆ ಗಂಡನೇ ಸಂಬಂಧ ಇಟ್ಟುಕೊಂಡಿದ್ದ ವಿಷಯ ಪತ್ತೆಹಚ್ಚಿದ ಶಕೀಲ್ ಪತ್ನಿ ಶಭಾನ, "ಪತಿಯ ಮೇಲೆ ನನಗೆ ಬಹಳ ದಿನಗಳಿಂದ ಅನುಮಾನವಿತ್ತು. ಆ ಯುವತಿ ಜೊತೆಗೆ ಆತ ಸಂದೇಶ ಕಳಿಸುವುದು, ವಿಡಿಯೋ ಕಾಲ್ ಮಾಡುವುದನ್ನು ನಾನು ನೋಡಿದ್ದೆ. ಇದಕ್ಕೆ ಸಂಬಂಧಿಸಿದಂತೆ ನಾನು ಮತ್ತು ನನ್ನ ಮಗ ಒಂದಷ್ಟು ದಾಖಲೆಗಳನ್ನು ಹುಡುಕಿದೆವು. ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಇಬ್ಬರೂ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎಲ್ಲ ದೃಢವಾದ ಮೇಲೆಯೇ ನಾವಿಬ್ಬರು ಶಕೀಲ್ ಕೊರಳಪಟ್ಟಿ ಹಿಡಿದು ಪ್ರಶ್ನಿಸಿದೆವು. ಸತ್ಯ ಬಟಾಬಯಲಾಗ್ತಿದ್ದಂತೆ ಕೆರಳಿದ ಪತಿ, ನನ್ನ ಮತ್ತು ಮಗನನ್ನು ಹಿಗ್ಗಾಮುಗ್ಗಾ ಥಳಿಸಿದ" ಎಂದು ಶಭಾನ ಅಳಲು ತೋಡಿಕೊಂಡಿದ್ದಾರೆ.
"ನನ್ನ ಮಗನಿಗೆ ಈ ಸತ್ಯ ಗೊತ್ತಾದ ಬೆನ್ನಲ್ಲೇ ಅವನು ನಿಶ್ಚಯಗೊಂಡಿದ್ದ ಯುವತಿ ಶಿವಾನಿ ಜೊತೆ ಮದುವೆಯಾಗಲು ನಿರಾಕರಿಸಿದ. ಪುತ್ರನ ಬಾಳು ಹಾಳು ಮಾಡಿದ ಶಕೀಲ್, ಶಿವಾನಿಯೊಂದಿಗೆ ಮನೆಬಿಟ್ಟು ಹೋಗಿ ಗುಟ್ಟಾಗಿ ಮದುವೆಯಾಗಿದ್ದಾನೆ. ಮನೆಯಲ್ಲಿದ್ದ 2 ಲಕ್ಷ ರೂ. ನಗದು ಮತ್ತು 17 ಗ್ರಾಂ ಚಿನ್ನವನ್ನು ಕದ್ದು ಪರಾರಿಯಾಗಿದ್ದಾನೆ" ಎಂದು ಶಭಾನ ಆರೋಪಿಸಿದ್ದಾರೆ. ಈ ಸಂಬಂಧಿತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,(ಏಜೆನ್ಸೀಸ್).