

ವಿಜಯಪುರ: ಸರ್ಕಾರದ ಜನಪರ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಸಾಧನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಆ ಮೂಲಕ ಜನಜಾಗೃತಿಯ ಜೊತೆಗೆ ಆಡಳಿತ ವರ್ಗದ ಕಾರ್ಯವೈಖರಿ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜೂ.20ರಿಂದ 26ರವರೆಗೆ ಹಮ್ಮಿಕೊಂಡಿರುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳ ಕುರಿತ ಮಾಹಿತಿ ವಸ್ತು ಪ್ರದರ್ಶನ ಮಳಿಗೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ, ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ, ಅಭಿವೃದ್ಧಿ-ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿನ್ನಿಡಲು ಮಾಹಿತಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಿಸಲಾಗಿದೆ ಎಂದರು.
ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆಡಳಿತ ವರ್ಗ ಅವುಗಳನ್ನು ಅನುಷ್ಟಾನಕ್ಕೆ ತರುತ್ತವೆ. ಆದರೆ, ಮಾಹಿತಿ ಕೊರತೆಯಿಂದಾಗಿ ಜನರು ಯೋಜನೆಗಳಿಂದ ದೂರವುಳಿಯುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಮಾಹಿತಿ ಪ್ರದರ್ಶನ ಅವಶ್ಯ ಎಂದರು.
ಬಳಿಕ ಜಿಲ್ಲಾಧಿಕಾರಿಗಳು, ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಅಳವಡಿಸಲಾದ ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಸಮಗ್ರ ಮಾಹಿತಿ, ಫಲಾನುಭವಿಗಳ ಅನಿಸಿಕೆ, ಸರ್ಕಾರವು ವಸತಿ ರಹಿತರಿಗೆ ಸೂರು ಕಲ್ಪಿಸಿದ ಮಾಹಿತಿ, ಇಂದಿರಾ ಕ್ಯಾಂಟೀನ್, ಆರೋಗ್ಯ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನೊಳಗೊಂಡ ಸಮಗ್ರ ಮಾಹಿತಿಯುಳ್ಳ ಫಲಕಗಳನ್ನು ವೀಕ್ಷಿಸಿದರು.
ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಾರ್ತಾಧಿಕಾರಿ ಅಮರೇಶ ದೊಡಮನಿ, ಕ್ರೀಡಾ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕೆಕೆಆರ್‌ಟಿಸಿ ಸಹಾಯಕ ಸಂಚಾರ ವ್ಯವಸ್ಥಾಪಕ ಜೆ.ಕೆ. ಹುಗ್ಗೆನ್ನವರ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಮಂಜುಳಾ ದುರಗನ್ನವರ, ಪ್ರಶಿಕ್ಷಣಾರ್ಥಿ ವಿದ್ಯಾಶ್ರೀ ಹೊಸಮನಿ ಮತ್ತಿತರರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಗಳಾದ ವಾರ್ತಾ ಜನಪದ ಮಾಸಿಕ ಹಾಗೂ ವಿಜಯಪುರ ಜಿಲ್ಲೆಯ ಪಂಚನದಿಗಳ ಬೀಡಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ವಸ್ತು ಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಯನ್ನೊಳಗೊಂಡ ಪುಸ್ತಕವನ್ನು ರಾಜ್ಯದ ಮುಖ್ಯಮಂತ್ರಿಗಳಿಂದ ಪಡೆಯುವಂತೆ ಬಿಂಬಿಸುವ ಸೆಲ್ಪಿ ತೆಗೆದುಕೊಂಡು ಜಿಲ್ಲಾಧಿಕಾರಿಗಳು ಎಲ್ಲರ ಗಮನ ಸೆಳೆದರು.