ನೇತ್ರಾವತಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆ-ಮಗನ ಶವ ಸಮುದ್ರ ಕಿನಾರೆ ಬಳಿ ಪತ್ತೆ...

Netravati 29 Feb 29
Published on

ಮಂಗಳೂರು: ಉದ್ಯಮಿ ಸಿದ್ಧಾರ್ಥ್​ ಸಾವಿನ ಬಳಿಕ ನೇತ್ರಾವತಿ ನದಿಯ ಉಳ್ಳಾಲ ಸೇತುವೆ ಸೂಸೈಡ್​ ಸ್ಪಾಟ್​ ಆಗಿ ಬದಲಾಗಿದೆ. ಈಗ ಇದೇ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗನ ಮೃತದೇಹಗಳು ಇಲ್ಲಿಂದ 50 ಕಿಮೀ ದೂರದಲ್ಲಿರುವ ಉಡುಪಿ ಜಿಲ್ಲೆಯ ಕಟಪಾಡಿ ಸಮುದ್ರದ ಕಿನಾರೆ ಬಳಿ ಪತ್ತೆಯಾಗಿವೆ.

ಗೋಪಾಲಕೃಷ್ಣ ರೈ(45) ಹಾಗೂ ಅವರ ಪುತ್ರ ಅನೀಶ್ ರೈ(6) ಫೆ.16ರಂದು ನೇತ್ರಾವತಿ ನದಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಇವರು ಬಂಟ್ವಾಳದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿಗಳು ಎನ್ನಲಾಗಿದೆ. ಗೋಪಾಲಕೃಷ್ಣ ರೈ ಅವರು ಮುಂಬೈನಲ್ಲಿ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲಷ್ಟೇ ಕೋಣಾಜೆಯ ಸಂಬಂಧಿಕರೋರ್ವರ ಮನೆಗೆ ಆಗಮಿಸಿದ್ದರು.

ಫೆ.16ರಂದು ಮುಂಜಾನೆ ತಮ್ಮ 6 ವರ್ಷದ ಮಗನೊಂದಿಗೆ ಕಾರು ಚಲಾಯಿಸಿಕೊಂಡು ಮನೆಯಿಂದ ಹೊರಟಿದ್ದಾರೆ ಎನ್ನಲಾಗಿದೆ. ಈ ಕಾರು ನೇತ್ರಾವತಿ ನದಿ ಸೇತುವೆ ಬಳಿ ಪತ್ತೆಯಾಗಿತ್ತು. ಕಾರು ಯಾರದ್ದು ಎಂದು ತಿಳಿಯದ ಕಾರಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹೆಚ್ಚಿನ ಪರಿಶೀಲನೆ ನಡೆಸಿದಾಗ ಗೋಪಾಲಕೃಷ್ಣ ರೈ ಅವರು ಬರೆದಿಟ್ಟಿದ್ದ ಡೆತ್​ ನೋಟ್​ ಪತ್ತೆಯಾಗಿತ್ತು. ನನಗೆ ಒಂದು ವಾರದಿಂದಲೂ ಸರಿಯಾಗಿ ನಿದ್ರೆ ಬರುತ್ತಿಲ್ಲ. ನಾನು ಮಗನನ್ನು ಕೊಲ್ಲುತ್ತಿರುವ ಮಹಾಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ. ಪತ್ನಿ ಅಶ್ವಿನಿ ರೈ..... ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿದ್ದೇವೆ ಎಂದು ಡೆತ್​ ನೋಟ್​ನಲ್ಲಿ ಬರೆದಿದ್ದರು.

ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು. ನಿನ್ನೆ ಕಟಪಾಡಿ ಸಮೀಪ ತಂದೆ-ಮಗನ ಶವ ಕೊಳೆತ ಸ್ಥಿತಿಯಲ್ಲಿ ಒಟ್ಟಿಗೇ ಸಿಕ್ಕಿವೆ. ಸದ್ಯ ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net