ಬಿಟ್‌ಕಾಯಿನ್ ಹೆಸರಿನಲ್ಲಿ ವಂಚಿಸಿದ್ದ ತಂದೆ-ಮಗ ಸೇರಿ ಮೂವರ ಬಂಧನ: ಕೋಟ್ಯಂತರ ರೂ.ಹೂಡಿಕೆ ಮಾಡಿಸಿಕೊಂಡು ವಂಚನೆ

Bitcoin (1)
Published on

ಬೆಂಗಳೂರು: ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಬಿಟ್‌ಕಾಯಿನ್ ಮೌಲ್ಯದ ಕ್ರಿಪ್ಟೋ ಕರೆನ್ಸಿ ನೀಡುವುದಾಗಿ ನಂಬಿಸಿ ಸಾವಿರಾರು ಮಂದಿಯಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ ತಂದೆ-ಮಗ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಸತೀಶ್ ಮಾಗಜಿ(೬೦), ಈತನ ಪುತ್ರ ಶ್ರೀಕಾಂತ್ ಮಾಗಾಜಿ(೩೨) ಮತ್ತು ಅವರ ಸಂಸ್ಥೆಯ ಸಿಬ್ಬಂದಿ ದೀಪಕ್(೩೦) ಬಂಧಿತರು. ಆರೋಪಿಗಳಿಂದ ೨ ಲ್ಯಾಪ್‌ಟಾಪ್, ಆರು ಕಂಪ್ಯೂಟರ್‌ಗಳು, ೪ ಮೊಬೈಲ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬಿಟ್‌ಕಾಯಿನ್ ನೆಪದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದು ನಂಬಿಸಿ ಸಾವಿರಾರರು ಮಂದಿಯಿಂದ ೮-೧೦ ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆರೋಪಿಗಳ ಪೈಕಿ ಸತೀಶ್ ಮತ್ತು ಪುತ್ರ ಶ್ರೀಕಾಂತ್ ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿ ಜಿಜಿ ಆನ್‌ಲೈನ್ ಪ್ರೈವೇಟ್ ಲಿವಿಟೆಡ್ ಎಂಬ ಕಂಪನಿ ಹೆಸರಿನ ಕಚೇರಿ ತೆರೆದಿದ್ದಾರೆ. ಈ ಕಚೇರಿಯಲ್ಲಿ ದೀಪಕ್ ಕೆಲಸ ಮಾಡಿಕೊಂಡಿದ್ದ. ಆರೋಪಿಗಳು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಜಿಜಿಓ ಎಂಬ ಕ್ರಿಪ್ಟೋ ಕರೆನ್ಸಿಯನ್ನು ನೀಡುವುದಾಗಿ ನಂಬಿಸಿದ್ದು, ಈ ಕ್ರಿಪ್ಟೋ ಕರೆನ್ಸಿಯನ್ನು ಅಂತಾರಾಷ್ಟ್ರೀಯ ಕ್ರಿಪ್ಟೋ ವಿನಿಮಯ ಕೇಂದ್ರದಲ್ಲಿ ಪರಿಚಯಿಸುವುದಾಗಿಯೂ ಭರವಸೆ ನೀಡಿದ್ದರು. ಅಲ್ಲದೆ, ಈ ಕ್ರಿಪ್ಟೋ ಕರೆನ್ಸಿಗೆ ಬಿಟ್‌ಕಾಯಿನ್ ಮೌಲ್ಯ ಬರುತ್ತದೆ ಎಂದು ನಂಬಿಸಿದ್ದರು.


ಆ ಬಳಿಕ ಕಂಪನಿಯ ಬಗ್ಗೆ ಹೆಚ್ಚು ಪ್ರಚಾರ ಮಾಡಲು ಮೊದಲು ಹೂಡಿಕೆ ಮಾಡಿದವರಿಗೆ ರಿವಾರ್ಡ್ ಎಂಬ ಹೆಸರಿನಲ್ಲಿ ಪ್ರತಿ ದಿನ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚುವರಿ ಶೇ.೧೫ ರಷ್ಟು ಹಣ ನೀಡುತ್ತಿದ್ದರು. ಅದನ್ನು ನಂಬಿದ ಹೂಡಿಕೆದಾರರು, ತಮ್ಮ ಸಂಬಂಧಿಕರು, ಸೇಹಿತರಿಗೆ ತಿಳಿಸಿ, ಹೂಡಿಕೆ ಮಾಡಿಸಿದ್ದಾರೆ. ಜತೆಗೆ ಆರೋಪಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ಗಳ ಮೂಲಕ ಪ್ರಚಾರ ಮಾಡಿದ್ದಾರೆ. ಅದರಿಂದ ಕಳೆದೊಂದು ವರ್ಷದಲ್ಲಿ ೧೩೦೦ರಿಂದ ೧೪೦೦ ಕ್ಕೂ ಅಧಿಕ ಮಂದಿ ೫-೬ ಕೋಟಿ ರೂ. ಹೂಡಿಕೆ ಮಾಡಿರುವುದು ಕಂಡು ಬಂದಿತ್ತು. ಆದರೆ, ಹೆಚ್ಚಿನ ತನಿಖೆ ಮಾಡಿದ್ದಾಗ ವಂಚನೆಯ ಮೌಲ್ಯ ೮-೧೦ ಕೋಟಿ ರೂ. ದಾಟಿದೆ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ನಕಲಿ ಕ್ರಿಪ್ಟೋ ಕರೆನ್ಸಿ:
ಮತ್ತೊಂದೆಡೆ ಆರೋಪಿಗಳು ಹೂಡಿಕೆದಾರರಿಗೆ ನೀಡುತ್ತಿದ್ದ ಕ್ರಿಪ್ಟೋ ಕರೆನ್ಸಿ ನಕಲಿ ಎಂಬುದು ಗೊತ್ತಾಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಮಾರುಕಟ್ಟೆಯಲ್ಲಿ ಯಾವುದೇ ಮಾನ್ಯತೆ ಅಥವಾ ಮೌಲ್ಯವಿಲ್ಲ. ಪ್ರಕರಣದ ಸಂಬಂಧ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ಸಿಸಿಬಿ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net