ಮದ್ಯದ ಅಮಲಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Crime Logo
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ಮೂವರು ಸ್ನೇಹಿತರು, ಪರಿಚಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ ಅಗ್ರಹಾರ ಮತ್ತು ಅಂಚೇಪಾಳ್ಯ ನಿವಾಸಿಗಳಾದ ಪ್ರಜ್ವಲ್, ರಾಹುಲ್ ಮತ್ತು ಅಭಿಷೇಕ್ ಬಂಧಿತರು.

ಜುಲೈ ೧೧ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಅಂಚೆಪಾಳ್ಯ ನಿವಾಸಿ ತೇಜಸ್ (೨೪) ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜತೆ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ. ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್‌ನ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಮತ್ತು ಅಭಿಷೇಕ್ ಬಾರ್‌ಗೆ ಬಂದಿದ್ದರು. ಒಟ್ಟಿಗೆ ಕುಳಿತು ಮದ್ಯಪಾರ್ಟಿ ಮಾಡುತ್ತಿದ್ದಾಗ ಮದ್ಯ ಕೊಡಿಸುವ ವಿಚಾರಕ್ಕೆ ತೇಜಸ್ ಮತ್ತು ಆರೋಪಿಗಳ ನಡುವೆ ಜಗಳ ಆರಂಭವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಗಳ ಅತಿರೇಕಕ್ಕೆ ತಿರುಗಿದಾಗ ‘ಇಲ್ಲೇ ಇರು ಬರುತ್ತೇವೆ’ ಎಂದು ಆರೋಪಿಗಳು ಹೊರ ಹೋಗಿದ್ದರು. ಇತ್ತ ಸಂತೋಷ್ ಹಾಗೂ ತೇಜಸ್ ಪಾರ್ಟಿ ಮುಗಿಸಿ ಹೊರಡಲು ಸಿದ್ಧವಾಗುತ್ತಿದ್ದಂತೆ ಮಾರಕಾಸ್ತ್ರಗಳ ಸಮೇತ ಬಂದಿದ್ದ ಆರೋಪಿಗಳು ತೇಜಸ್‌ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ತೇಜಸ್‌ನ ಕಾಲು ಭಾಗಶಃ ತುಂಡಾಗಿದ್ದು, ಕುತ್ತಿಗೆ ಹಿಂಭಾಗಕ್ಕೂ ತೀವ್ರ ಗಾಯವಾಗಿದೆ. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ತೇಜಸ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net