ಬೌನ್ಸರ್‌ಗಳಿಂದ ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ

Crime Logo
Published on

ಬೆಂಗಳೂರು: ಪಬ್‌ನ ಬೌನ್ಸರ್‌ಗಳು ಇಬ್ಬರು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೌನ್ಸರ್‌ಗಳಾದ ಶ್ರೀನಿವಾಸ್ (೪೪), ಅಲೇಕ್ಷಂಡರ್ ಮ್ಯಾಥ್ಯು (೩೩), ಚಾಲಕ ರಘು (೩೪) ಮತ್ತು ಸೆಕ್ಯೂರಿಟಿ ಗಾರ್ಡ್ ಸಂತೋಷ್ ಸಿಂಗ್ (೪೨) ಬಂಧಿತರು.
ಅಶೋಕನಗರ ಠಾಣೆ ವ್ಯಾಪ್ತಿಯ ಆರ್ಬರ್ ಬ್ರೀವಿಂಗ್ ಪಬ್‌ನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ದೆಹಲಿ ಮೂಲದ ಖಾಸಿಸ್ ರೋಸ್ತಗಿ(೩೨) ಮತ್ತು ಆತನ ಸ್ನೇಹಿತ ಇಮಾಂಶು (೩೦) ಗಾಯಗೊಂಡವರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಿಸ್ ರೋಸ್ತಗಿ ಕೆಲ ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಸ್ನೇಹಿತ ಇಮಾಂಶು, ಕಳೆದ ವಾರವಷ್ಟೇ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ. ಇಬ್ಬರು ಬುಧವಾರ ರಾತ್ರಿ ಅಶೋಕನಗರದ ಆರ್ಬರ್ ಪಬ್‌ಗೆ ಹೋಗಿದ್ದು, ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ತಡರಾತ್ರಿ ೧೨.೩೦ರ ಸುಮಾರಿಗೆ ಮನೆಗೆ ಹೊರಡಲು ಪಾರ್ಕಿಂಗ್ ಸ್ಥಳಕ್ಕೆ ಬಂದು ಮಾತನಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಪಬ್‌ನ ಬೌನ್ಸರ್‌ಗಳು ಪಾರ್ಕಿಂಗ್ ಸ್ಥಳಕ್ಕೆ ಬಂದು, ಕಂಡು ತಡವಾಗಿದೆ ಸ್ಥಳದಿಂದ ತೆರಳುವಂತೆ ಹೇಳಿದ್ದಾರೆ. ಆಗ ಗಾಯಾಳುಗಳು ಬೌನ್ಸರ್‌ಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಅದರಿಂದ ಆಕ್ರೋಶಗೊಂಡ ಬೌನ್ಸರ್‌ಗಳು ಕಬ್ಬಿಣದ ರಾಡ್, ಹೆಲ್ಮೆಟ್‌ನಿಂದ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಒಬ್ಬನ ಹಣೆ ಭಾಗದಲ್ಲೀ ತೀವ್ರ ರಕ್ತಸ್ರಾವವಾಗಿದ್ದು, ಮತ್ತೊಬ್ಬನಿಗೆ ಬೆನ್ನಿನ ಭಾಗದಲ್ಲಿ ಗಾಯಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ನಿರ್ಲಕ್ಷ್ಯದ ಆರೋಪ:
ಪಬ್‌ನಲ್ಲಿ ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಇಬ್ಬರು ಸಿಬ್ಬಂದಿ, ಗಲಾಟೆ ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬೌನ್ಸರ್‌ಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಘಟನೆ ಬಳಿಕ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಆದರೆ, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಠಾಣೆ ಅಧಿಕಾರಿಗಳು ಗಾಯಾಳು ಖಾಸಿಸ್ ರೋಸ್ತಗಿ ಅವರಿಂದ ದೂರು ಪಡೆದುಕೊಂಡು, ನಾಮಕೇವಾಸ್ತೆಗೆ ಐವರು ಬೌನ್ಸರ್‌ಗಳನ್ನು ಬಂಧಿಸಿ, ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರಿಂದ ಹಲ್ಲೆ ಆರೋಪ:
ಮತ್ತೊಂದೆಡೆ ಘಟನೆ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವೈದ್ಯೆ ವನ್ಶಿಕಾ ಮೊಗಾ ಎಂಬ ಮಹಿಳೆ ಪೊಲೀಸ್ ಅಧಿಕಾರಿ ಜೆಪಿ ಪವಾರ್ ಎಂಬುವರು ಗಾಯಾಳುಗಳ ಮೇಲೆಯೇ ಕಬ್ಬಿಣದ ರಾಡ್ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಸಂಬಂಧ ದೂರು ನೀಡಲು ತೆರಳಿದಾಗ ಎಫ್‌ಐಆರ್ ದಾಖಲಿಸಿಕೊಳ್ಳಲು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ವಿಡಿಯೋವನ್ನು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದರು. ಆ ಬಳಿಕ ಪೊಲೀಸರು, ಆಸ್ಪತ್ರೆಗೆ ತೆರಳಿ ಗಾಯಾಳು ಖಾಸಿಸ್ ರೋಸ್ತಗಿಯಿಂದ ದೂರು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net