

ಕೀರ್ತಿನಾರಾಯಣ ಸಿ. ಬೆಂಗಳೂರು
ಬ್ರೇಕ್ ಇನ್ಸ್ಪೆಕ್ಟರ್ಗಳು ಭೌತಿಕವಾಗಿ ವಾಹನಗಳನ್ನು ಪರಿಶೀಲಿಸಿದ ಬಳಿಕ ಫಿಟ್ನೆಸ್ ಸರ್ಟಿಫಿಕೇಟ್ ಕೊಡುವ ಪದ್ಧತಿ ಕರ್ನಾಟಕದಲ್ಲಿ ಶೀಘ್ರವೇ ಕೊನೆಯಾಗಲಿದೆ. ಇದೇ ಅ.1ರಿಂದ ಮಾನವ ಹಸ್ತಕ್ಷೇಪ ಇಲ್ಲದೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲೇ (ಎಟಿಎಸ್) ವಾಹನ ತಪಾಸಣೆ ನಡೆಸುವ ನಿಯಮ ಅನುಷ್ಠಾನಗೊಳ್ಳಲಿದೆ. ಒಂದು ವೇಳೆ ಎಫ್ಸಿ ಸಿಗದಿದ್ದರೆ ಅಂತಹ ವಾಹನಗಳು ಯಾವುದೇ ಮುಲಾಜಿಲ್ಲದೆ ಗುಜರಿ ಸೇರಲಿವೆ.
ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ (ವಾಹನ ಸ್ಕ್ರಾ್ಯಪಿಂಗ್ ಸೌಲಭ್ಯ ನೋಂದಣಿ ಮತ್ತು ಕಾರ್ಯ) 2021ರ ಅನ್ವಯ ಎಲ್ಲ ಸಾರಿಗೆ ವಾಹನಗಳನ್ನು ಕಡ್ಡಾಯವಾಗಿ ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್ಗಳಲ್ಲೇ ಪರಿಶೀಲಿಸಬೇಕು, ಅರ್ಹತೆ ಹೊಂದಿರುವ ವಾಹನಕ್ಕಷ್ಟೇ ಎಫ್ಸಿ ನೀಡಬೇಕು. ಕೆಲ ರಾಜ್ಯಗಳಲ್ಲಿ ಈಗಾಗಲೇ ನಿಯಮ ಜಾರಿಯಾಗಿದ್ದು, ಕರ್ನಾಟಕದಲ್ಲಿ ಅ.1ರಿಂದ ಅನುಷ್ಠಾನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ವಾಯುಮಾಲಿನ್ಯ ನಿಯಂತ್ರಣದ ಜತೆಗೆ ಅಪಘಾತಗಳ ಪ್ರಮಾಣ ತಗ್ಗಿಸಬೇಕೆಂಬುದು ನಿಯಮದ ಹಿಂದಿರುವ ಉದ್ದೇಶ. ಕರ್ನಾಟಕದಲ್ಲಿ ಸದ್ಯ ಬೆಂಗಳೂರಿನ ನೆಲಮಂಗಲ, ಮೈಸೂರು ಹಾಗೂ ಧಾರವಾಡಗಳಲ್ಲಿ ಮಾತ್ರವೇ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳಿವೆ. ಬೆಂಗಳೂರಿನ ರಾಜಾನುಕುಂಟೆ, ದೇವನಹಳ್ಳಿ, ಕೋಲಾರ, ಬೆಳಗಾವಿ, ಕಲಬುರಗಿ ಮಂಗಳೂರು ಮತ್ತು ಶಿವಮೊಗ್ಗಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಬೇಕೆಂಬ ಪ್ರಸ್ತಾವನೆ ಇದೆ.
ಗುಜರಿ ನೀತಿ ಅನುಷ್ಠಾನದ ಭಾಗವಾಗಿ ಸದ್ಯ ದೇಶಾದ್ಯಂತ 75 ಆಟೋಮೇಟೆಂಡ್ ಟೆಸ್ಟಿಂಗ್ ಕೇಂದ್ರಗಳು ಕಾರ್ಯಾರಂಭಿಸಿವೆ. 60 ಗುಜರಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಕರ್ನಾಟಕದಲ್ಲಿ ದೇವನಹಳ್ಳಿ ಬಳಿ 1 ಗುಜರಿ ಕೇಂದ್ರ ಆರಂಭಿಸಲಾಗಿದೆ.
ಹೇಗಿರಲಿದೆ ಪರೀಕ್ಷೆ?: ಪರೀಕ್ಷಾ ಕೇಂದ್ರಗಳಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿ ವೈಜ್ಞಾನಿಕವಾಗಿಯೇ ನಡೆಯಲಿದ್ದು, ಶೇ.100 ಕರಾರುವಕ್ಕಾಗಿ ವಾಹನದ ಅರ್ಹತೆಯ ತಪಾಸಣೆ ಕಾರ್ಯ ನಡೆಯಲಿದೆ. ಟ್ರಾನ್ಸ್ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ, ಪ್ರತಿ 2 ವರ್ಷಕ್ಕೊಮ್ಮೆ ಎಫ್ಸಿ ಮಾಡಿಸಬೇಕು. 8 ವರ್ಷಗಳ ನಂತರ ಪ್ರತಿವರ್ಷ ಎಫ್ಸಿ ಕಡ್ಡಾಯಗೊಳಿಸಲಾಗಿದೆ. ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳಲ್ಲಿ ಗುಣಮಟ್ಟವಿಲ್ಲದೆ ತಿರಸ್ಕೃತಗೊಂಡ ವಾಹನಗಳನ್ನು ರಿಪೇರಿ ಮಾಡಿಸಿ ತರಲು, ಕೆಲವೊಮ್ಮೆ ಸಲಹೆ ಕೊಡಲಾಗುತ್ತದೆ. ನಂತರವೂ ಪಾಸ್ ಆಗದಿದ್ದರೆ ಸಂಚಾರಕ್ಕೆ ಯೋಗ್ಯವಲ್ಲ ಎಂದೇ ಪರಿಗಣಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
4000 ವಾಹನ ಗುಜರಿಗೆ: ರಾಜ್ಯದಲ್ಲಿ ಗುಜರಿ ನೀತಿ ಜಾರಿಗೆ ತರಲಾಗಿದೆ. 6 ಕಡೆ ಸ್ಕ್ರಾ್ಯಪಿಂಗ್ ಘಟಕಗಳ ಸ್ಥಾಪಿಸಲು ಸಾರಿಗೆ ಇಲಾಖೆ ಉದ್ದೇಶಿಸಿದೆ. ಆದರೆ, ಸದ್ಯ ದೇವನಹಳ್ಳಿ ಬಳಿ 1 ಸ್ಕ್ರಾ್ಯಪಿಂಗ್ ಘಟಕ ಮಾತ್ರ ಸ್ಥಾಪನೆ ಮಾಡಲಾಗಿದ್ದು, ಈವರೆಗೆ 15 ವರ್ಷ ಪೂರೈಸಿರುವ 3 ರಿಂದ 4 ಸಾವಿರ ವಾಹನಗಳಷ್ಟೇ ಗುಜರಿಗೆ ಬಂದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
14 ಲಕ್ಷ ಹಳೇ ವಾಹನ : ದೇಶದಲ್ಲಿ ನೋಂದಣಿ ಪತ್ರ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಗುಜರಿಗೆ ಹೋಗಲು ಅರ್ಹವಾಗಿರುವ 1.2 ಕೋಟಿ ವಾಹನಗಳಿವೆ. ಕರ್ನಾಟಕದಲ್ಲಿ ಅಂದಾಜು 14.3 ಲಕ್ಷ ವಾಹನಗಳು 15 ವರ್ಷ ಮೇಲ್ಪಟ್ಟಿವೆ. ಹಳೇ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಗುಜರಿಗೆ ಹಾಕುವ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣ ಪತ್ರ (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣ ಪತ್ರ ತೋರಿಸಿದರೆ ಸಾರಿಗೆಯೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ.
| ಸಿ.ಮಲ್ಲಿಕಾರ್ಜುನ ಹೆಚ್ಚುವರಿ ಸಾರಿಗೆ ಆಯುಕ್ತರು