ತಿಂಗಳಲ್ಲಿ ಭೂ ಮಂಜೂರಾತಿ ನೀಡದಿದ್ದರೆ ಉಪವಾಸ ಸತ್ಯಾಗ್ರಹ

Published on

ಸೋಮವಾರಪೇಟೆ: ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟದ ನಿವೇಶನಕ್ಕೆ ಒಂದು ತಿಂಗಳಲ್ಲಿ ಭೂ ಮಂಜೂರಾತಿ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದೇಶ ಸೇವೆಯಲ್ಲಿ ಜೀವದ ಹಂಗು ತೊರೆದು ದುಡಿದ ಅರೆ ಸೇನಾಪಡೆಯ ನಿವೃತ್ತ ಯೋಧರಿಗೆ ಕಂದಾಯ ಇಲಾಖೆ ಅನ್ಯಾಯ ಮಾಡುತ್ತಿದೆ ಎಂದು ಒಕ್ಕೂಟದ ಸಂಚಾಲಕರಾದ ಎನ್.ಎಂ.ಭೀಮಯ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದ ಸರ್ವೇ ನಂ 10/2ರಲ್ಲಿ 0.20 ಸೆಂಟ್ ಜಾಗಕ್ಕಾಗಿ ಮನವಿ ಮಾಡಿದ ಮೇರೆಗೆ ತಾಲೂಕು ಭೂಮಾಪಕರಿಂದ 2013 ಜೂ.10 ರಂದು ಸರ್ವೇ ಮತ್ತು 2019 ಮಾ.5ರಲ್ಲಿ ಮರುಸರ್ವೇ ಮಾಡಿ, ಜಾಗ ವಿಂಗಡಿಸಿದ ನಂತರ ಹದ್ದುಬಸ್ತು ಮಾಡಿದ್ದಾರೆ. ಈಗ ಜಾಗ ಒಕ್ಕೂಟದ ಸ್ವಾಧೀನದಲ್ಲಿದೆ. ಕಡತ ಕಳೆದ 12 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲೇ ಧೂಳು ತಿನ್ನುತ್ತಿದೆ. ಒಮ್ಮೆ ಪ್ರಾದೇಶಿಕ ಕಚೇರಿ ಮೈಸೂರಿಗೆ ರವಾನೆಯಾಗಿದ್ದು ಬಿಟ್ಟರೆ ಈಗ ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿದೆ. ನೂರಾರು ಬಾರಿ ಕಚೇರಿಗೆ ಅಲೆದರೂ, ಕಂದಾಯ ಇಲಾಖೆ ಸಿಬ್ಬಂದಿ ಅಸಡ್ಡೆ ತೋರಿಸುತ್ತ ಶೋಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಭೂ ಮಂಜೂರಾತಿ ಮಾಡಿಸಿಕೊಡುವಂತೆ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಹಾಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಭೂ ಮಂಜೂರಾತಿ ಸಾಧ್ಯವಾಗದಿದ್ದರೆ, ಕಡತವನ್ನು ಸರ್ಕಾರಕ್ಕೆ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಶಾಸಕರಾದ ಪೊನ್ನಣ್ಣ ಸೂಚನೆ ನೀಡಿದ್ದಾರೆ. ಆದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪ್ರತಿ ಜಿಲ್ಲೆಯಲ್ಲಿ ಅರೆಸೇನಾ ಪಡೆಯ ಪಡಿತರ ಕ್ಯಾಂಟೀನ್ ಸ್ಥಾಪನೆ ಮಾಡಬೇಕು. ಈಗ ಬೆಂಗಳೂರಿನ ಯಲಹಂಕದಲ್ಲಿ ಮದ್ಯಸಹಿತ ಪಡಿತರ ಕ್ಯಾಂಟೀನ್ ಇದ್ದು, ವಯಸ್ಸಾದವರು ಅಲ್ಲಿಂದ ತರಲು ಸಾಧ್ಯವಾಗುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯ ತರವುದಕ್ಕೆ ನಿಷೇಧವಿದ್ದು ತೊಂದರೆಯಾಗಿದೆ ಎಂದು ಹೇಳಿದರು. ಕೊಡಗು ವಿಶ್ವವಿದ್ಯಾಲಯವನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಯೋಜನೆ ರೂಪಿಸಬೇಕು. ಶಿಕ್ಷಕರನ್ನು ನೇಮಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ಕಾರ್ಯದರ್ಶಿ ಬಿ.ಎಂ.ರವೀಂದ್ರ, ಜಂಟಿ ಕಾರ್ಯದರ್ಶಿ ಬಿ.ಎನ್.ರಾಜಶೇಖರ್, ನಿರ್ದೇಶಕರಾದ ಡಿ.ಎಸ್.ನಳಿನಿ ಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net