14 ರಂದು ಡಿಸಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ

Published on

ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯ ಮುಂಭಾಗದಲ್ಲಿ ಆ.14 ರಂದು ರೈತ ಸಂಘದ ವತಿಯಿಂದ ನೂರಾರು ರೈತರೊಂದಿಗೆ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜಮೀನಿಗಳಿಗೆ ಕಬಿನಿ ಎರಡನೇ ಹಂತ ಜಾರಿ, ರಾಸುಗಳನ್ನು ಕಾಡಿಗೆ ಬಿಡುವುದರ ಬಗ್ಗೆ ನಿಷೇಧ ತಂದಿರುವ ಕ್ರಮ, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ, ಬೆಳೆ ಹಾನಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಿಗೆ ಕೆಸ್ಸಾರ್ಟಿಸಿ ವತಿಯಿಂದ ಹೆಚ್ಚು ಬಸ್‌ಗಳನ್ನು ಓಡಿಸುವುದು, ಯಳಂದೂರು ತಾಲೂಕಿನಲ್ಲಿ ಬಸ್ ನಿಲ್ದಾಣ ನಿರ್ಮಾಣ, ಕೆರೆಗಳ ಅಭಿವೃದ್ಧಿ ಕಾಮಗಾರಿ, ಪಟ್ಟಣ ಪ್ರವಾಸಿ ಮಂದಿರ ಶಿಥಿಲವಾಗಿದೆ, ಗಣ್ಯ ವ್ಯಕ್ತಿಗಳ ಆಗಮಿಸುವ ಕೊಠಡಿಗಳ ಅವ್ಯವಸ್ಥೆಯಿಂದ ಕೂಡಿದೆ, ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ದುರಸ್ತಿಪಡಿಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಚಾಮಲಾಪುರ ಸಿದ್ದಲಿಂಗಸ್ವಾಮಿ, ಉಪಾಧ್ಯಕ್ಷ ಪುಟ್ಟಮಾದೇಗೌಡ, ಹಸಿರು ಸೇನೆ ತಾಲೂಕು ಅಧ್ಯಕ್ಷ ವೃಷಭೇಂದ್ರ, ಮಹದೇವಸ್ವಾಮಿ, ಲೋಕೇಶ್ ಅಂಬಳೆ ಸೇರಿದಂತೆ ಅನೇಕರು ಇದ್ದರು.

ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net