

ಸವಣೂರ: ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಂಗಾಲಾಗಿರುವ ರೈತರು ಬಿತ್ತಿದ ಬೆಳೆಯನ್ನು ನಾಶಪಡಿಸುತ್ತಿರುವುದು ತಾಲೂಕಿನಲ್ಲಿ ಸಾಮಾನ್ಯವಾಗಿದೆ.
ತಾಲೂಕಿನಲ್ಲಿ 44 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಅದರಲ್ಲಿ ಅಂದಾಜು 27 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಗೋವಿನಜೋಳ ಬಿತ್ತನೆಯಾಗಿದೆ. ಆದರೆ, ಮಳೆ ಕೈಕೊಟ್ಟಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಆದ್ದರಿಂದ, ರೈತರು ಗೋವಿನಜೋಳ ಬೆಳೆಯನ್ನು ತೆಗೆದು ಹಾಕುತ್ತಿದ್ದಾರೆ. ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಬುಧವಾರ ರೈತ ಅಶೋಕ ಕಳಲಕೊಂಡ ಅವರು 6 ಎಕರೆ ಕೃಷಿ ಜಮೀನಿನಲ್ಲಿ ಬಿತ್ತಿದ ಗೋವಿನಜೋಳ ಬೆಳೆಯನ್ನು ರೂಟರ್‌ನಿಂದ ಹರಗಿದ್ದಾರೆ.
‘ಹೊಲ ಲಾವಣಿ ಪಡೆದು ಪ್ರತಿ ಎಕರೆಗೆ ಸುಮಾರು 35 ಸಾವಿರ ರೂ. ಖರ್ಚುಮಾಡಿ ಬೆಳೆದಿದ್ದ ಗೋವಿನಜೋಳ ಸಂಪೂರ್ಣ ಹಾಳಾಗಿದೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲು 1 ಲಕ್ಷ ರೂ. ಗಳಿಗೆ ತಂದಿದ್ದ ಎರಡು ಎತ್ತಗಳನ್ನು ಕೇವಲ 60 ಸಾವಿರ ರೂ.ಗಳಿಗೆ ಮಾರಬೇಕಾಯಿತು’ ಎಂದು ಅಶೋಕ ಕಳಲಕೊಂಡ ಅಸಹಾಯಕತೆ ವ್ಯಕ್ತಪಡಿಸಿದರು.
ಬರಗಾಲ ತರ್ತು ಪರಿಸ್ಥಿತಿ ಎದುರಿಸಲು ಮೇಲಧಿಕಾರಿಗಳ ಸಲಹೆ ಮೇರೆಗೆ 20 ಲಕ್ಷ ರೂ. ಕಾಯ್ದಿರಿಸಲಾಗಿದೆ. ರೈತರಿಗೆ ಸೂಕ್ತ ಸಲಹೆ ನೀಡಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಬರ ಸಮೀಕ್ಷೆ ವರದಿಯನ್ನು ಸಲ್ಲಿಸಲಾಗಿದೆ.I ಗಣೇಶ ಸವಣೂರ, ತಹಸೀಲ್ದಾರ್ ಸವಣೂರ