ಮಣಿದ ಕೇಂದ್ರ, ಗೆದ್ದ ರೈತ: ಮೂರು ಕೃಷಿ ಕಾಯ್ದೆ ವಾಪಸ್, ಪ್ರಧಾನಿ ಮೋದಿ ಘೋಷಣೆ

Front
Published on

ನವದೆಹಲಿ: ‘ಕೃಷಿಗೆ ಸಂಬಂಧಿಸಿ ನಾನು ಏನೆಲ್ಲ ಮಾಡಿದ್ದೇನೋ ಅದು ದೇಶದ ರೈತರಿಗಾಗಿ. ಆದರೆ, ಈಗ ನಾನು ಏನು ಮಾಡುತ್ತಿದ್ದೇನೋ, ಅದೂ ದೇಶಕ್ಕಾಗಿ...’ಕೃಷಿ ಕ್ಷೇತ್ರದ ಆಮೂಲಾಗ್ರ ಸುಧಾರಣೆಗಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಘೋಷಿಸಿದಾಗ ಬೇಸರ ಅವರ ಮುಖದಲ್ಲಿ ಮಡುಗಟ್ಟಿತ್ತು. 3 ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಮನಸ್ಸಿಲ್ಲದಿದ್ದರೂ, ದಿಲ್ಲಿ ಗಡಿಯಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ ಹಾಗೂ ಎದುರಾಳಿ ರಾಜಕೀಯ ಪಕ್ಷಗಳು ಇದನ್ನೇ ಚುನಾವಣೆಗೆ ಅಸ್ತ್ರವನ್ನಾಗಿ ಬಳಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದುಕೊಳ್ಳಲು ತೀರ್ವನಿಸಿದೆ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ತಿಳಿಸಿದ್ದಾರೆ.

ಅಧಿವೇಶನದಲ್ಲೇ ವಾಪಸ್: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ಮೂರು ಕಾಯ್ದೆಗಳನ್ನು ಹಿಂಪಡೆಯ ಲಾಗುವುದು. ದಿಲ್ಲಿ ಗಡಿಗಳಲ್ಲಿ ಪ್ರತಿಭಟನಾನಿರತ ರೈತರು ತಮ್ಮ ಹೋರಾಟ ಕೊನೆಗೊಳಿಸಿ ತಮ್ಮ ಮೂಲ ರಾಜ್ಯಗಳಿಗೆ ವಾಪಸ್ ಹೋಗಬೇಕೆಂದು ಮನವಿ ಮಾಡುತ್ತೇನೆ.

ಗುರುಪರಬ್​ನ ಈ ಶುಭದಿನದಂದು ಪ್ರತಿಭಟನೆ ನಿಲ್ಲಿಸಿ ಹೊಸ ದಿನ ಶುರು ಮಾಡುವಂತೆ ರೈತ ಮಿತ್ರರಲ್ಲಿ ಮನವಿ ಮಾಡುತ್ತೇನೆ ಎಂದು ಮೋದಿ ಕೋರಿದರು. ಕೃಷಿ ಬಜೆಟ್ ಅನ್ನು ಐದು ಪಟ್ಟು ಹೆಚ್ಚಳ ಮಾಡಿ ರೂ. 1.25 ಲಕ್ಷ ಕೋಟಿಗೆ ಏರಿಸಿದ ಕ್ರಮ ಸೇರಿ, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ರೈತರ ಪರ ಕೈಗೊಂಡ ನಿರ್ಧಾರಗಳನ್ನು ಪ್ರಧಾನಿ ವಿವರಿಸಿದರು. ಎಂದಿಗೂ ಈ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿಲ್ಲ ಎಂದು ಸಮರ್ಥಿಸಿಕೊಂಡರು.

ರಾಜಕೀಯ ವ್ಯಾಖ್ಯಾನ: ಮೋದಿ ಸರ್ಕಾರದ ತೀರ್ವನವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದ್ದು, ವಿಪಕ್ಷಗಳು ಇದು ರಾಜಕೀಯ ಲಾಭಕ್ಕಾಗಿ ಮಾಡಿದ ನಿರ್ಧಾರ ಎಂದು ವ್ಯಂಗ್ಯವಾಡಿವೆ. ರೈತ ಹೋರಾಟದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡರು. ಅವರ ಸಾವಿಗೆ ಹೊಣೆ ಯಾರು ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ.

ಹೋರಾಟದ ಹಿನ್ನೆಲೆ: ಕೇಂದ್ರದ ಕೃಷಿ ಕಾನೂನುಗಳನ್ನು ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ರೈತರು ಹೆಚ್ಚಾಗಿ ವಿರೋಧಿಸಿದ್ದರು. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಮಾರುಕಟ್ಟೆ ನಿರ್ವಣಕ್ಕೆ ನಾವು ಅವಕಾಶ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ವಿವರಿಸಿದ್ದರೂ, ಈ ಭಾಗದ ರೈತರಿಗೆ ಸ್ವೀಕಾರಾರ್ಹವೆನಿಸಿರಲಿಲ್ಲ. ಮೇಲಾಗಿ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಆರ್​ಎಲ್​ಡಿ, ಸಮಾಜವಾದಿ ಪಾರ್ಟಿ ಸೇರಿದಂತೆ ವಿಪಕ್ಷಗಳು ರೈತ ಹೋರಾಟಕ್ಕೆ ರಾಜಕೀಯ ಬೆಂಬಲ ನೀಡಿ ಮೋದಿ ಸರ್ಕಾರವನ್ನು ಗುರಿ ಮಾಡಿದ್ದವು. ದೆಹಲಿಗೆ ಅಂಟಿಕೊಂಡಿರುವ ಟಿಕ್ರಿ, ಸಿಂಘು ಮತ್ತು ಘಾಜಿಪುರ್ ಗಡಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದಲ್ಲದೆ, ಕಾನೂನು ಹಿಂಪಡೆಯುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ 12ಕ್ಕಿಂತಲೂ ಹೆಚ್ಚು ಸುತ್ತಿನ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ. ಕಾನೂನು ಹಿಂಪಡೆಯಲೇಬೇಕು ಎಂದು ರೈತರು ಹಠಕ್ಕೆ ಬಿದ್ದರೆ, ಕೇಂದ್ರ ಸರ್ಕಾರ ತಿದ್ದುಪಡಿ ಮಾಡುವುದಾಗಿ ಹೇಳಿತ್ತು. ಹೀಗಾಗಿ, ಈ ಮಾತುಕತೆಗಳು ಅಪೂರ್ಣಗೊಂಡಿದ್ದವು. ಏತನ್ಮಧ್ಯೆ, ಕಾನೂನುಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಯ್ತು ಮತ್ತು ನಿವೃತ್ತ ಸಿಜೆಐ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಮುಂದಿನ ಆದೇಶದವರೆಗೆ ಕೃಷಿ ಕಾನೂನುಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಆದೇಶ ನೀಡಿತ್ತು ಮತ್ತು ಈ ಕಾನೂನುಗಳ ಪರಾಮರ್ಶೆಗೆ ಸಮಿತಿಯನ್ನೂ ರಚನೆ ಮಾಡಿತ್ತು. ಆದರೆ, ಅಂತಿಮವಾಗಿ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಹಿಂಪಡೆಯಲು ನಿರ್ಧರಿಸುವುದರೊಂದಿಗೆ ಕೋರ್ಟ್​ನಲ್ಲಿರುವ ಕೇಸುಗಳು ಬಹುತೇಕ ಅಲ್ಲಿಗೆ ಇತ್ಯರ್ಥಗೊಂಡಂತಾಗಲಿವೆ.

ರೈತರ ವಿರೋಧ ಏಕಿತ್ತು?

  • ಕೃಷಿ ಉತ್ಪನ್ನಗಳಿಗೆಕನಿಷ್ಠ ಬೆಂಬಲ ಬೆಲೆ ನೀಡುವ ಪದ್ಧತಿ ಮುಂದುವರಿಕೆ ವಿಚಾರವಾಗಿ ಮೂರು 3 ಕಾಯ್ದೆಗಳಲ್ಲಿ ಉಲ್ಲೇಖವಿರಲಿಲ್ಲ.
  • ಬೆಂಬಲ ಬೆಲೆ ತೆಗೆಯುವುದಿಲ್ಲ ಎಂಬ ಕೇಂದ್ರ ಸರ್ಕಾರದ ಭರವಸೆ ಮೌಖಿಕವಾಗಿದ್ದುದಕ್ಕೆ ಆಕ್ಷೇಪ, ಕಾಯ್ದೆಗಳೂ ಕೃಷಿ, ರೈತರಿಗೆ ಮಾರಕ, ಕಾಪೋರೇಟ್ ಕಂಪನಿಗಳ ಪರ ಎಂಬ ತಜ್ಞರ ನಿಲುವು

ಲಾಭವಿಲ್ಲ, ನಷ್ಟವೇ: ಕಾನೂನು ಹಿಂಪಡೆಯುವುದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಭವಿಷ್ಯದಲ್ಲಿ ರೈತರಿಗೆ ಮತ್ತಷ್ಟು ಹಾನಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಕಿಸಾನ್ ಸಂಘ ಅತೃಪ್ತಿ ವ್ಯಕ್ತಪಡಿಸಿದೆ. ರೈತರೊಂದಿಗೆ ಸಂಘರ್ಷ ತಪ್ಪಿಸಲು ಕಾನೂನು ಹಿಂಪಡೆದದ್ದೇನೋ ಸರಿ. ಆದರೆ, ದೀರ್ಘಾವಧಿಯಲ್ಲಿ ಇದು ರೈತರಿಗೆ ಒಳ್ಳೆಯದನ್ನು ಮಾಡದು. ಕೆಲ ಸ್ವಯಂಘೋಷಿತ ರೈತರ ಹಠಮಾರಿ ಧೋರಣೆಯಿಂದ ಇಡೀ ರೈತ ವರ್ಗಕ್ಕೆ ನಷ್ಟವಾಗಲಿದೆ ಎಂದು ಬಿಕೆಎಸ್ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಅಪಪ್ರಚಾರ: ಮೋದಿ ಸರ್ಕಾರ ರೈತ ವಿರೋಧಿ ಮತ್ತು ಉದ್ಯಮಿಗಳ ಪರ ಎಂದು ವಿಪಕ್ಷಗಳು ರಾಜಕೀಯ ನಿರೂಪಣೆ ಮಾಡುತ್ತಿರುವುದರಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರೊಂದಿಗೂ ರ್ಚಚಿಸಿ ಕೇಂದ್ರ ಸರ್ಕಾರ ಇಂಥದ್ದೊಂದು ತೀರ್ವನಕ್ಕೆ ಬಂತು ಎಂಬ ಮಾತುಗಳು ಕೇಳಿಬಂದಿವೆ.

ಮೂರೂ ಕೃಷಿ ಕಾಯ್ದೆಗಳ ಉದ್ದೇಶ ರೈತರನ್ನು ಸಬಲೀಕರಣಗೊಳಿಸುವುದೇ ಆಗಿತ್ತು. ಅದರಲ್ಲೂ ಸಣ್ಣ ಕೃಷಿಕರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಅವಿರತ ಪ್ರಯತ್ನದ ಹೊರತಾಗಿಯೂ ಒಂದು ವರ್ಗದ ರೈತರ ಮನವೊಲಿಕೆ ಸಾಧ್ಯವಾಗಲಿಲ್ಲ. | ನರೇಂದ್ರ ಮೋದಿ ಪ್ರಧಾನಿ

ಕ್ಷಮೆಕೋರಿದ ಮೋದಿ: ರೈತರ ಹೋರಾಟದಲ್ಲಿ ಪಂಜಾಬಿನ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣಕ್ಕೆ ಸಿಖ್ಖರ ಪವಿತ್ರ ಗುರುನಾನಕ್ ಜಯಂತಿ ದಿನದಂದೇ ಈ ಘೋಷಣೆ ಮಾಡಿದ ಮೋದಿ, ನಾನು ನೈಜ ಮತ್ತು ಶುದ್ಧ ಹೃದಯದಿಂದ ದೇಶದ ಜನರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಕೃಷಿ ಸುಧಾರಣೆಗೆ ಕಾಯ್ದೆ ತಂದು, ಆ ಬಗ್ಗೆ ವಿವರಣೆ ನೀಡುವಲ್ಲಿ ನಮ್ಮ ಅವಿರತ ಶ್ರಮದ ಹೊರತಾಗಿಯೂ ರೈತರ ಒಂದು ವರ್ಗದ ಮನವೊಲಿಸಲಾಗಲಿಲ್ಲ. ಬಹುಶಃ ನಮ್ಮ ಪ್ರಯತ್ನದಲ್ಲೇ ನ್ಯೂನತೆ ಇದ್ದಿರಬಹುದು. ಹೀಗಾಗಿ, ನಿಮ್ಮಲ್ಲಿ ಕ್ಷಮೆ ಕೋರುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಜ್ಯದಲ್ಲಿ ಏನಾಗುತ್ತದೆ?: ಕೇಂದ್ರದ ನಿರ್ಧಾರದ ಕುರಿತು ವಿವರ ಸಂಗ್ರಹಿಸಿದ ನಂತರ ರಾಜ್ಯದಲ್ಲೂ ಈ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ವಾಪಸ್​ಗೆ ಕಾರಣ

  • ಮುಂಬರುವ ಪಂಜಾಬ್, ಉ.ಪ್ರದೇಶ ಚುನಾವಣೆ, ರೈತರ ಮನವೊಲಿಕೆ ಯಲ್ಲಿ ಸಿಗದ ಯಶಸ್ಸು
  • ಪಕ್ಷದ ವರ್ಚಸ್ಸು ಉಳಿಸುವ, ಪ್ರತಿಭಟನೆ ಪರಿಣಾಮದ ಆತಂಕ
  • ಕೇಂದ್ರ ಉದ್ಯಮಿಗಳ ಪರ ಎಂಬ ಅಪವಾದ ಕಳಚುವುದು, ಪ್ರತಿಪಕ್ಷ ಗಳಿಗೆ ರಾಜಕೀಯ ಅಸ್ತ್ರ ತಪ್ಪಿಸುವುದು

ಯಾವ್ಯಾವ ಕಾಯ್ದೆ ರದ್ದು?

  • ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು)ಕಾಯ್ದೆ-2020
  • ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಜಮೀನು ಸೇವೆಗಳ ಒಪ್ಪಂದ ಕಾಯ್ದೆ-2020
  • ಅಗತ್ಯ ವಸ್ತುಗಳ ಕಾಯ್ದೆ (1955ಕ್ಕೆ ತಂದಿರುವ ತಿದ್ದುಪಡಿ)

ಕಾಯ್ದೆ ರದ್ದತಿ ಹೇಗೆ?

  • ಕಾಯ್ದೆಯ ಅನುಷ್ಠಾನಕ್ಕೆ ಸಂವಿಧಾನದ ಅಡಿ ಏನೇನು ಪ್ರಕ್ರಿಯೆ ಕೈಗೊಳ್ಳಬೇಕೋ ಅವೆಲ್ಲವನ್ನೂ ರದ್ಧತಿ ಮಾಡಬೇಕು
  • ತಿದ್ದುಪಡಿಗಾಗಿ ಪ್ರಸ್ತಾವನೆಯನ್ನು ಸಂಬಂಧಪಟ್ಟ ಸಚಿವಾಲಯ ಕಾಯ್ದೆ ಸಚಿವಾಲಯಕ್ಕೆ ಕಳುಹಿಸಬೇಕು, ಸಚಿವಾಲಯ ಕಾಯ್ದೆ ಅಂಶಗಳನ್ನು ಪರಿಶೀಲಿಸಲಿದೆ, ಈ ಪ್ರಕ್ರಿಯೆ ನಂತರ ಚರ್ಚೆ ನಡೆದು ಮತ ಚಲಾಯಿಸಬೇಕು
  • ಆ ಬಳಿಕ ಸಂಬಂಧಿಸಿದ ಸಚಿವರು ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net