

ಶಿವಮೊಗ್ಗ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಈ ಬಾರಿ ಬರಗಾಲ ಗಂಭೀರವಾಗಿದ್ದು ರೈತರಿಗೆ, ನಗರ-ಪಟ್ಟಣಗಳ ಜನರಿಗೆ ಕುಡಿಯಲು ಮತ್ತು ದಿನ ಬಳಕೆಗೆ ನೀರಿಲ್ಲದಂತಾಗಿದೆ. ಆದರೂ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಸರಿಯಲ್ಲ. ಇದೀಗ ಪ್ರತಿನಿತ್ಯ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವುದು ಆಘಾತಕಾರಿಯಾಗಿದೆ. ಕಾವೇರಿ ನದಿ ನೀರಿನ ನಿಯಂತ್ರಣ ಮಂಡಳಿ ಮುಂದೆ ಸಂಕಷ್ಟ ಕಾಲದ ಸೂತ್ರವನ್ನು ಜಾರಿಗೆ ತರುವಂತೆ ಗಮನ ಸೆಳೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಶೀಘ್ರದಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ಕಾವೇರಿ ನೀರಿಗೆ ಪರ್ಯಾಯ ಸುರಕ್ಷತಾ ಕ್ರಮಕ್ಕೆ ಮುಂದಾಗುವುದು ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರಾಜ್ಯ ಉಪಾಧ್ಯಕ್ಷರಾದ ಟಿ.ಎಂ.ಚಂದ್ರಪ್ಪ, ಹಿಟ್ಟುರು ರಾಜು, ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಮುಖಂಡರಾದ ಜಿ.ಎನ್.ಪಂಚಾಕ್ಷರಿ, ಜಾನೇಶ್, ಸಿ.ಚಂದ್ರಪ್ಪ, ಕಸಟ್ಟು ರುದ್ರೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.