

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನ. 19ರಂದು ಘೋಷಿಸಿರುವಂತೆ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಮಸೂದೆ ಸಂಸತ್ನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರವೇ ಮಂಡನೆಯಾಗಲಿದೆ. ಜತೆಗೆ ಇನ್ನಿತರ ಬೇಡಿಕೆಗಳ ಬಗ್ಗೆ ರ್ಚಚಿಸಲು ಸಮಿತಿ ರಚನೆ ಮಾಡಲಾಗುವುದು, ಇದರಲ್ಲಿ ರೈತರ ಪ್ರತಿನಿಧಿಗಳು ಇರುತ್ತಾರೆ. ಆದ್ದರಿಂದ ರೈತರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಈ ಮೂಲಕ ಸರ್ಕಾರ ಕೃಷಿಕರ ಮನವೊಲಿಸುವ ಪ್ರಯತ್ನ ಮಾಡಿದೆ. ಜತೆಗೆ ಕೃಷಿ ತ್ಯಾಜ್ಯಗಳನ್ನು ಸುಡುವುದು ಅಪರಾಧ ಅಲ್ಲ ಎಂದೂ ಕೇಂದ್ರ ಸರ್ಕಾರ ಹೇಳಿದೆ.
ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಯು ಅಧಿಕೃತವಾಗುವವರೆಗೂ ಪ್ರತಿಭಟನೆ ವಾಪಸು ಇಲ್ಲ. ಆದರೆ, ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಸೋಮವಾರ ಹಮ್ಮಿಕೊಂಡಿರುವ ಸಂಸತ್ ಚಲೋ ಟ್ರಾ್ಯಕ್ಟರ್ ಚಳವಳಿಯನ್ನು ಮುಂದೂಡಲಾಗುವುದು ಎಂದು ರೈತ ಸಂಘಟನೆಗಳು ಹೇಳಿವೆ. ಹೀಗಾಗಿ ಸರ್ಕಾರ ಮತ್ತು ರೈತರ ಮಧ್ಯೆ ಬಿಕ್ಕಟ್ಟು ಬಹುತೇಕ ಕಡೆಯ ಹಂತಕ್ಕೆ ಬಂದಿದ್ದರೂ, ಪೂರ್ಣವಾಗಿ ಬಗೆಹರಿದಿಲ್ಲ.
ಪ್ರತಿಭಟನೆ ಹಿನ್ನೆಲೆ: ಕಳೆದ ವರ್ಷ ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಯನ್ನು ಸಂಸತ್ ಅಂಗೀಕರಿಸಿತು. ಇದರ ಬೆನ್ನಿಗೆ ರಾಷ್ಟ್ರಪತಿ ಅಂಕಿತ ಬಿದ್ದು ಅವು ಕಾಯ್ದೆಗಳಾದವು. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (40ಕ್ಕೂ ಹೆಚ್ಚು ರೈತ ಸಂಘಟನೆಗಳ ಛಾತ್ರ) ನೇತೃತ್ವದಲ್ಲಿ 2020ರ ನವೆಂಬರ್ 26ರಂದು ಪ್ರತಿಭಟನೆ ಆರಂಭವಾಯಿತು. ದೆಹಲಿ ಗಡಿಗಳನ್ನು ಬಂದ್ ಮಾಡಿ ರೈತರು ಧರಣಿ ಕುಳಿತರು. ದೇಶದ ವಿವಿಧೆಡೆಯಲ್ಲೂ ಪ್ರತಿಭಟನೆ ವ್ಯಕ್ತವಾಯಿತು. ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ ಹಲವು ಸುತ್ತು ಮಾತುಕತೆ ನಡೆದರೂ ಬಿಕ್ಕಟ್ಟು ಬಗೆಹರಿಯಲಿಲ್ಲ. ವಿಷಯ ಸುಪ್ರೀಂಕೋರ್ಟ್ಗೂ ಹೋಯಿತು. ಸರ್ಕಾರ ಒಂದೂವರೆ ವರ್ಷ ಕಾಯ್ದೆ ತಡೆಹಿಡಿಯುವ ಭರವಸೆ ನೀಡಿತು. ಆದರೆ ರೈತರು ಕಾಯ್ದೆ ರದ್ದತಿಯ ಬೇಡಿಕೆಯಿಂದ ಹಿಂದೆಸರಿಯಲಿಲ್ಲ. ಇತ್ತೀಚೆಗೆ ಈ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು.
ಕೂಳೆ ಸುಡುವುದು ಅಪರಾಧವಲ್ಲ: ಫಸಲು ಕಟಾವಿನ ನಂತರ ಉಳಿಯುವ ತ್ಯಾಜ್ಯಕ್ಕೆ (ಕೂಳೆ ) ಬೆಂಕಿ ಹಚ್ಚುವುದನ್ನು ಅಪರಾಧ ಪಟ್ಟಿಯಿಂದ ಕೈಬಿಡಬೇಕು ಎಂಬ ರೈತರ ಒತ್ತಾಯ ಒಪ್ಪಿಕೊಳ್ಳಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ದೆಹಲಿ ಎನ್ಸಿಆರ್ ವ್ಯಾಪ್ತಿಯ ರೈತರು ಫಸಲು ಕಟಾವಿನ ನಂತರ ಉಳಿಯುವ ತ್ಯಾಜ್ಯಕ್ಕೆ (ಕೂಳೆ) ಬೆಂಕಿ ಹಚ್ಚುತ್ತಾರೆ. ಇದರಿಂದ ದೆಹಲಿಯಲ್ಲಿ ಪ್ರತಿ ವರ್ಷ ನವೆಂಬರ್/ಡಿಸೆಂಬರ್ ತಿಂಗಳಲ್ಲಿನಲ್ಲಿ ವಾಯು ಮಾಲಿನ್ಯ ಹೆಚ್ಚುತ್ತದೆ. ಇದನ್ನು ತಡೆಯಲು ಕೂಳೆ ಸುಡುವ ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ಆದೇಶಿಸಿತ್ತು. ಜತೆಗೆ ದಂಡ ವಿಧಿಸುತ್ತಿತ್ತು. ಇದನ್ನು ಕೈಬಿಡಬೇಕು ಎಂಬುದು ರೈತರ ಆಗ್ರಹವಾಗಿತ್ತು.
ಎಂಎಸ್ಪಿಗೆ ಕಾನೂನು ಅಸಾಧ್ಯ?: ರೈತರ ಬೇಡಿಕೆಯಲ್ಲಿ ಪ್ರಮುಖವಾದ ಎಂಎಸ್ಪಿಗೆ ಶಾಸನಾತ್ಮಕ ಖಾತ್ರಿ ವಿಷಯ ಕಗ್ಗಂಟಾಗುವ ಸಾಧ್ಯತೆ ಇದೆ. ಎಂಎಸ್ಪಿಗೆ ಶಾಸನ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂಬ ವಿಷಯ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮತ್ತು ಪ್ರಧಾನಿ ಮೋದಿ ಜತೆಗಿನ ಭೇಟಿ ವೇಳೆ ಬಹಿರಂಗವಾಗಿದೆ ಎಂದು ಹೇಳಲಾಗಿದೆ. ಮೂರು ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಎಲ್ಲ ಬೆಳೆಗಳಿಗೆ ಶಾಸನಾತ್ಮಕ ಎಂಸಿಪಿ ನೀಡುವುದು ಬಹುಶಃ ಸಾಧ್ಯವಾಗದ ಮಾತು. ಒಂದೇ ವೇಳೆ ಈ ರೀತಿಯ ಕಾನೂನು ತಂದರೆ ಸರ್ಕಾರಕ್ಕೆ ಸಾಧ್ಯವಾಗದ ಎಲ್ಲ ಬೆಳೆಗಳನ್ನು ಖರೀದಿಸುವ ಒತ್ತಡ ಬರುತ್ತದೆ ಎನ್ನುವ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ ಎಂದು ಮನೋಹರ ಖಟ್ಟರ್ ಪ್ರಧಾನಿ ಭೇಟಿಯ ನಂತರ ತಿಳಿಸಿದ್ದಾರೆ.