

ಬೆಂಗಳೂರು: ಉದ್ಯಮಕ್ಕೆ ಲವತ್ತಾದ ಜಮೀನು ಸ್ವಾಧೀನ ವಿರೋಧಿಸಿ ದೇವನಹಳ್ಳಿ, ಚನ್ನರಾಯಪಟ್ಟಣದ ರೈತರು ಹೂಡಿರುವ ಚಳಚಳಿಗೆ ಬಲ, ಬೆಂಬಲ ಹೆಚ್ಚುತ್ತಿದೆ. ರೈತರು ಹಿಡಿದಿರುವ ಬಿಗಿಪಟ್ಟು ಸಿಎಂ ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಚನ್ನರಾಯಪಟ್ಟಣ ಸೇರಿ 13 ಹಳ್ಳಿಗಳ ರೈತರು 1,777 ಎಕರೆ ಜಮೀನು ಸ್ವಾಧೀನಕ್ಕೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಸಂಯುಕ್ತ ಕರ್ನಾಟಕ ಹೋರಾಟ ನೇತೃತ್ವದಲ್ಲಿ ನಡೆದಿರುವ ಚಳವಳಿಗೆ ರಾಜ್ಯದ ಹತ್ತಾರು ಜಿಲ್ಲೆಗಳ ಅನೇಕ ಸಂಘಟನೆಗಳು ಕೈಜೋಡಿಸಿವೆ. ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಿಸಿದ್ದು, ಇದೇ ವೇಳೆ ಸ್ಟೀಲ್ ಉದ್ಯಮಕ್ಕೆ ಜಮೀನು ವಿರೋಧಿಸುತ್ತಿರುವ ಕೊಪ್ಪಳ ಜಿಲ್ಲೆ ರೈತರ ಹೋರಾಟವೂ ಮುನ್ನೆಲೆಗೆ ಬಂದಿವೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಜತೆಗೆ 13 ಹಳ್ಳಿಗಳ ರೈತರು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅಂತಿಮ ಅಧಿಸೂಚನೆ ಹೊರಬಿದ್ದು ಜಮೀನು ಕೈಬಿಟ್ಟು ಹೋಗುವುದು ಖಚಿತವಾಗುತ್ತಿದ್ದಂತೆಯೇ ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.
ವಿವಿಧ ಸಂಘಟನೆಗಳು, ಪ್ರಮುಖರು ಕೈಜೋಡಿಸಿ ಒತ್ತಡ ಹೇರಿದ್ದಾರೆ. ಮುಖಂಡರನ್ನು ಸಿಎಂ ಸಿದ್ದರಾಮಯ್ಯ ಖುದ್ದು ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ. ಜು.4ರಂದು ಜಂಟಿ ಸಭೆ ಕರೆಯುವ ಭರವಸೆ ನೀಡಿದ್ದು, ಅಲ್ಲಿಯವರೆಗೆ ಸರ್ಕಾರ ವಾಯಿದೆ ಪಡೆದಂತಾಗಿದೆ.
ಪ್ರಸ್ತಾವಿತ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ 1,777 ಎಕರೆ ಜಮೀನು ಸ್ವಾಧೀನಕ್ಕೆ ಕೆಎಐಡಿಬಿ ಮುಂದಾಗಿದೆ. ರೈತರ ಮೂರು ವರ್ಷಗಳ ಚಳವಳಿಗೆ ಮಣಿದು, ಚನ್ನರಾಯಪಟ್ಟಣ, ಮಟ್ಟಿಬಾರ್ಲು ಸೇರಿ ನಾಲ್ಕು ಹಳ್ಳಿಗಳ 495 ಎಕರೆ ಜಮೀನು ಸ್ವಾಧೀನದಿಂದ ಕೈಬಿಡಲು ಸರ್ಕಾರ ಒಪ್ಪಿದೆ.
ಇದಕ್ಕೊಪ್ಪದ ಗುರುತಿಸಿದ 1,777 ಎಕರೆ ಜಮೀನು ಲವತ್ತಾಗಿದೆ. ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೆಐಎಡಿಬಿ ಸ್ವಾಧೀನ ಮಾಡಿದ ಜಮೀನು, ಬಳಕೆ, ಉದ್ಯಮಸ್ಥಾಪನೆ ವಿವರಗಳನ್ನು ಪ್ರಕಟಿಸಲು ಒತ್ತಾಯಿಸಿದ್ದಾರೆ.
ಉದ್ಯಮಗಳ ಸ್ಥಾಪನೆ ಹೆಸರಿನಲ್ಲಿ ಲವತ್ತಾದ ಕೃಷಿ ಜಮೀನು ಸ್ವಾಧೀನ ಮಾಡಿಕೊಂಡು, ರೈತರಿಗೆ ಒಕ್ಕಲೆಬ್ಬಿಸಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಿದು ಎಂದು ಹೋರಾಟ ನಿರತ ರೈತರು ಆರೋಪಿಸಿದ್ದಾರೆ.
ಉದ್ದೇಶಿತ ಪಾರ್ಕ್‌ಗೆ ಗುರುತಿಸಿದ ಜಮೀನಿಗೆ ಹಿಂದಿನ ಬಿಜೆಪಿ ಸರ್ಕಾರ ಪ್ರಾಥಮಿಕ ಭೂಸ್ವಾಧೀನ ಅಧಿಸೂಚನೆ ಹೊರಡಿಸಿತ್ತು. ಆಗ ರೈತರ ಹೋರಾಟಕ್ಕೆ ಸ್ಪಂದನೆ, ವಿರೋಧಕ್ಕೆ ಧ್ವನಿಗೂಡಿಸಿದ್ದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಈ ಅಧಿಸೂಚನೆ ರದ್ದುಪಡಿಸುವ ಭರವಸೆ ನೀಡಿದ್ದರು.
ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಭರವಸೆ ಈಡೇರಿಲ್ಲ. ಬದಲಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ ವಾಗ್ದಾನವನ್ನು ಹೋರಾಟಗಾರರು ನೆನಪು ಮಾಡಿಕೊಡುತ್ತಿದ್ದಾರೆ.
ಒಂದೆಡೆ ಬಂಡವಾಳ, ಉದ್ಯಮಗಳ ಆಕರ್ಷಣೆಗೆ ಮತ್ತೊಂದೆಡೆ ಜಮೀನು ಸ್ವಾಧೀನಕ್ಕೆ ರೈತರ ವಿರೋಧವು ರಾಜ್ಯ ಸರ್ಕಾರ ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರನ್ನು ಸಂದಿಗ್ಧ ಸಿಲುಕಿಸಿದೆ ಎಂದು ಹೇಳಲಾಗಿದೆ.
ನಿಗದಿಯಾದ ಜು.4ರ ಜಂಟಿ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಕಷ್ಟವೇ ಎಂಬ ಸ್ಥಿತಿ ಸೃಷ್ಟಿಯಾಗಿದೆ. ಒತ್ತಡಕ್ಕೆ ಮಣಿದು ಜಮೀನು ಸ್ವಾಧೀನ ಕೈಬಿಟ್ಟರೆ, ಕೊಪ್ಪಳ ಸೇರಿ ಉದ್ಯಮಕ್ಕೆ ಜಮೀನು ಸ್ವಾಧೀನ ವಿರೋಧಿಸುತ್ತಿರುವ ಉಳಿದ ಜಿಲ್ಲೆಗಳ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ.
ಒಂದಂಶದ ಕಾರ್ಯಸೂಚಿಯನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಬೇಡಿಕೆ ಈಡೇರದೆ ಹೋದರೆ ‘ಕರ್ನಾಟಕ ಬಂದ್’ಗೂ ಚಿಂತನೆ ನಡೆಸಿದ್ದಾರೆ. ಬೇರೆ ಜಿಲ್ಲೆಗಳ ಸಂಘಟನೆಗಳು ಬೆಂಬಲಿಸಲು ಸಜ್ಜಾಗಿವೆ ಎಂದು ತಿಳಿದಿದೆ.