ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

CTD 14 Protest-01
Published on

ಚಿತ್ರದುರ್ಗ

ರಾಜಕೀಯ ಪಕ್ಷಗಳೆಲ್ಲ ಸುಳ್ಳಿನ ಮೆರವಣಿಗೆ ನಡೆಸುತ್ತಿವೆ. ಇದರಿಂದ ರೈತರ, ಜನಸಾಮಾನ್ಯರ ಉದ್ಧಾರ ಸಾಧ್ಯವಿಲ್ಲವೆಂದು ಆರೋಪಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಶಾಖೆ ಕಾರ್ಯಕರ್ತರು ಬೆಸ್ಕಾಂ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಸರ್ಕಾರ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಆಶ್ವಾಸನೆ ನೀಡಿ ಈಡೇರಿಸದ ಜನಪ್ರತಿನಿಧಿಗಳು ಗ್ರಾಮ ಪ್ರವೇಶಿಸಿದರೆ ಮಸಿ ಬಳಿಯಲಾಗುವುದು. ನಿಗದಿಪಡಿಸಿರುವ ವಿದ್ಯುತ್‌ನ ಕನಿಷ್ಠ ದರ ಹಿಂಪಡೆಯಬೇಕು ಎಂದು ಸಿಎಂಗೆ ಒತ್ತಾಯಿಸಿ ಬೆಸ್ಕಾಂ ಮೂಲಕ ಮನವಿ ರವಾನಿಸಿದರು.

ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ರೈತರ ಶ್ರಮ, ಕಷ್ಟ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಬಯಲುಸೀಮೆ ಭಾಗದವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಮುಂದಾಗುತ್ತಿಲ್ಲ. ಎಲ್ಲರೂ ಭರವಸೆಗಳ ಶೂರರಾಗಿದ್ದಾರೆ. ಸುಳ್ಳು ಹೇಳುವಲ್ಲಿಯೂ ಪೈಪೋಟಿ ನೀಡುತ್ತಲೇ ವಂಚಿಸುತ್ತಿದ್ದಾರೆ ಎಂದು ದೂರಿದರು.

ಶಾಖೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ತಾಲೂಕು ಅಧ್ಯಕ್ಷರಾದ ಮಂಜುನಾಥ್, ಸತೀಶ್, ಗೌರವಾಧ್ಯಕ್ಷ ರಾಜಣ್ಣ, ಅಪ್ಪರಸನಹಳ್ಳಿ ಬಸವರಾಜ್, ಚಿಕ್ಕಬ್ಬಿಗೆರೆ ನಾಗರಾಜ್, ಎಂ. ಬಸವರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net