

ಎನ್.ಆರ್.ಪುರ: ಈ ಬಾರಿ ಮುಂಗಾರು ಅರಂಭದಲ್ಲಿ ಅಬ್ಬರಿಸಿದ ಮಳೆ ನಂತರದ ದಿನಗಳಲ್ಲಿ ಮಂಕಾಗಿರುವುದರಿಂದ ಮುಂಗಾರು ನಂಬಿ ಭೂಮಿ ಹಸನುಮಾಡಿ ಬಿತ್ತನೆ ಮಾಡಿದ ರೈತರು ಮಳೆ ಇಲ್ಲದೆ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ ಅತಿವೃಷ್ಟಿಯಾಗಿ ಡ್ಯಾಂ, ಹಳ್ಳ, ಕೆರೆಗಳಲ್ಲಿ ನೀರು ತುಂಬಿತ್ತು. ಆದರೆ ಈ ಬಾರಿ ಮಳೆ ಇಲ್ಲದಿರುವುದರಿಂದ ಕೊಳವೆ ಬಾವಿ ಹೊಂದಿರುವ ರೈತರು ಮಾತ್ರ ಭತ್ತ ನಾಟಿ ಮಾಡಿದ್ದಾರೆ. ಹಳ್ಳ, ಕೆರೆ ನೀರು ಆಶ್ರಯಿಸಿ ಬೆಳೆಯುವ ರೈತರು ನಾಟಿ ಮಾಡದೆ ಕೈಚೆಲ್ಲಿದ್ದಾರೆ.
ಭದ್ರಾ ಹಿನ್ನೀರಿನಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಅಧಿಕ ಮಳೆಯಾಗಿ ಹಿನ್ನೀರಿನಲ್ಲಿ ಸಾಕಷ್ಟು ಮೀನುಗಳು ಸಿಗುವ ಈ ಸಮಯದಲ್ಲಿ ಭದ್ರಾ ಹಿನ್ನೀರಿನಲ್ಲಿ ನೀರಿಲ್ಲದಿರುವುದರಿಂದ ಮೀನುಗಳು ಸಿಗದಂತಾಗಿದೆ. ಇದರಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವಾತಾವರಣ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ಎದುರಾಗಲಿದೆ. ಮಳೆಗಾಲದಲ್ಲೂ ಜಲಕ್ಷಾಮ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ತಾಲೂಕಿನ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಸ್ಥಿತಿ ಬರಲಿದೆ.
ಈ ವರ್ಷಲ್ಲಿ ಇಲ್ಲಿಯವರೆಗೆ ಬಂದಿರುವ ಮಳೆಗೆ ಭೂಮಿ ಸರಿಯಾಗಿ ಹಸನಾಗಿಲ್ಲ. ಆಶ್ಲೇಷ ಮಳೆಯೂ ಸರಿಯಾಗಿ ಬರಲಿಲ್ಲ. ಮೆ ಮಳೆ ಉತ್ತಮವಾಗಿ ಬರುವ ನಿರೀಕ್ಷೆ ಇದೆ. ಮೆ ಮಳೆ ಬಂದರೆ ಬೆಳೆಗಳಿಗೆ, ಹಳ್ಳ, ಕೊಳ್ಳಗಳಲ್ಲಿ ನೀರಾಗಲಿದೆ. ಮೆ ಮಳೆಯೂ ಬಾರದಿದ್ದರೆ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ.
ಮರೆಯಾದ ಮಳೆಗಾಲ: ಮಳೆಗಾಲವೆಂದರೆ ಮಲೆನಾಡಿಗೆ ಸಂಭ್ರಮ, ಮಳೆಗಾಲದ ಅನುಭವ ಸವಿಯಲು ಕೆಲವರು ಮಲೆನಾಡಿಗೆ ಬರುತ್ತಾರೆ. ದಟ್ಟವಾದ ಕಾರ್ಮೋಡ, ಹೊರಗಡೆ ಕಾಲಿಡಲಾಗದಷ್ಟು ಮಳೆ ಆರ್ಭಟ, ಹಳ್ಳ, ಕೊಳ್ಳ, ಡ್ಯಾಂ, ಕೆರೆಗಳು ಮೈದುಂಬಿ ಹರಿಯುವ ದೃಶ್ಯವನ್ನು ನೋಡಲು ಜನ ಸಾಗರವೇ ಆಗಮಿಸತ್ತದೆ. ಆದರೆ ಈ ಬಾರಿ ಮಳೆಗೆ ಛತ್ರಿ ಹಿಡಿದು ತಿರುಗಾಡುವ ಬದಲು ಬಿಸಿಲಿನ ಝಳಕ್ಕೆ ಛತ್ರಿ ಹಿಡಿದು ತಿರುಗಾಡುವಂತಾಗಿದೆ.
ಬರಗಾಲ ದೂರವಿಲ್ಲ:
ಮಳೆ ಇಲ್ಲದೆ ಬೆಳೆಗಳು ಒಣಗುವ ನಾಶವಾಗುವ ಸಂಭವವಿದೆ. ಬಹುತೇಕ ರೈತರು ಹಳ್ಳಗಳ, ಕೆರೆಗಳ ನೀರು, ನೈಸರ್ಗಿಕ ನೀರಿನ ಮೂಲಗಳನ್ನು ಆಶ್ರಯಿಸಿದ್ದಾರೆ. ಮಳೆ ಇಲ್ಲದೆ ಕೃಷಿಕರು ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುವಂತಾಗಿದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಹೀಗೇ ಮುಂದುವರಿದರೆ ಬರಪೀಡಿತ ತಾಲೂಕು ಎಂದು ಘೋಷಿಸುವ ಸಮಯ ದೂರವಿಲ್ಲ .
ನಡೆಯದ ಸಭೆಗಳು: ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ಟಿ.ಡಿ.ರಾಜೇಗೌಡ ಚುನಾವಣೆ ಕಳೆದು ಹಲವು ತಿಂಗಳಾದರೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದಿಲ್ಲ. ಮಳೆಯಾಗದಿರುವುದರಿಂದ ರೈತರ ಸಮಸ್ಯೆ ಬಗ್ಗೆ ತಾಲೂಕು ಆಡಳಿತದೊಂದಿಗೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯುವ ಅನಿವಾರ್ಯತೆ ಇದೆ. ಜಾನುವಾರುಗಳಿಗೆ ಮೇವಿನ ಕೊರತೆ, ರೈತರಿಗೆ ಗೊಬ್ಬರದ ಬಗ್ಗೆ ಪಶುವೈದ್ಯ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಬೇಕಿದೆ. ಸಂಕಷ್ಟದ ಸಮಯದಲ್ಲಿ ಶಾಸಕರು ರೈತರು, ಬೆಳೆಗಾರರ ಸಮಸ್ಯೆ ಆಲಿಸಿ ಅಗತ್ಯಕ್ರಮಕೈಗೊಳ್ಳಬೇಕಿದೆ.
ಮಾನವ, ಪ್ರಾಣಿಗಳ ಸಂಘರ್ಷ: ಈ ಬಾರಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕಾಡಿನಲ್ಲಿ ನೀರು, ಆಹಾರ ಸಿಗದೆ ಕಾಡು ಪ್ರಾಣಿಗಳು ನಾಡಿನ ಕಡೆ ಮುಖಮಾಡಿವೆ. ಕಾಡಾನೆಗಳ ಹಾವಳಿ ತೀವ್ರವಾಗಿದೆ. ಕಳೆದ ತಿಂಗಳು ಸ್ಪಲ್ಪ ಮಳೆಯಾಗಿದ್ದರಿಂದ ಕಾಡಾನೆಗಳ ಹಾವಳಿ ಕಡಿಮೆಯಾಗಿತ್ತು. ಈಗ ಮತ್ತೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪಟ್ಟಣಕ್ಕೆ ಅರ್ಧ ಕಿ.ಮೀ ದೂರಕ್ಕೆ ಬಂದಿರುವ ಆನೆಗಳು ಮುಂದೆ ಪಟ್ಟಣಕ್ಕೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ತಾಲೂಕಿನಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗಲಿದೆ.
ಮಳೆ ಜಾಸ್ತಿಯಾಗುತ್ತಿದೆ, ಅತಿವೃಷ್ಟಿ ಕ್ರಮದ ಬಗ್ಗೆ ಸಭೆ ಕರೆಯಬೇಕು ಎನ್ನುಕೊಳ್ಳುವಾಗಲೇ ಬರಗಾಲ ಆವರಿಸಿದೆ. ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ತಾಲೂಕಿನಲ್ಲಿ ಕುಡಿಯುವ ನೀರು, ರೈತರ ಸಮಸ್ಯೆಗಳಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೇಗೌಡ ಮಾಹಿತಿ ನೀಡಿದರು.