

ಇಂದು ರೈತ ದಿನ ಆಚರಿಸಲಾಗುತ್ತಿದೆ. ಕೃಷಿ ಕ್ಷೇತ್ರ ಸಹ ಹಲವು ಪಲ್ಲಟಗಳನ್ನು, ಸವಾಲುಗಳನ್ನು ಕಂಡು ಸುಧಾರಣೆಯತ್ತ ಮುಖ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಕೃಷಿಯನ್ನು ಉತ್ತೇಜಿಸುವ, ರೈತರನ್ನು ಬೆಂಬಲಿಸುವ ನೀತಿಗಳನ್ನು ಪ್ರಭುತ್ವ ರೂಪಿಸಿ, ಜಾರಿಗೊಳಿಸಿದರೆ ಅಭಿವೃದ್ಧಿಯ ಹೊಸ ಆಯಾಮ ತೆರೆದುಕೊಂಡಂತೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ. ಮಣ್ಣು, ಬಿತ್ತನೆ ಬೀಜಗಳ ವಿಚಾರದಲ್ಲಿ ರೈತರನ್ನು ಸ್ವಾವಲಂಬಿ ಮಾಡಲು ಮುಂದಾಗಿರುವ ಜತೆಗೆ, ರೈತ ವಿದ್ಯಾನಿಧಿಯನ್ನು ವಿದೇಶದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ನೀಡಲು ಉದ್ದೇಶಿಸಿದೆ. ವಾರ್ಷಿಕ ನೂರು ರೈತ ಮಕ್ಕಳಿಗಾದರೂ ಇದರ ಲಾಭ ದೊರಕಿಸಿಕೊಡುವ ಆಶಯವನ್ನು ಸರ್ಕಾರ ಹೊಂದಿದೆ.
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಭೂಮಿಯ ಫಲವತ್ತತೆ ಹೆಚ್ಚಿಸಲು ಸಮಗ್ರ ಕೃಷಿಗೆ ಒತ್ತು ನೀಡಲಿದೆ. ಆ ಮೂಲಕ ಸಿರಿಧಾನ್ಯ ಬೆಳೆಗಳನ್ನು ಪ್ರೋತ್ಸಾಹಿಸಲಿದೆ. ಬಿತ್ತನೆ ಬೀಜಕ್ಕಾಗಿ ಖಾಸಗಿ ಕಂಪನಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು, ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಬಿತ್ತನೆ ಬೀಜ ಉತ್ಪಾದಿಸಲು ಮುಂದಾಗಿದೆ. ಅತಿಯಾದ ನೀರಿನ ಅವಲಂಬನೆ ತಪ್ಪಿಸಿ ಹವಾಮಾನಕ್ಕೆ ಅನುಗುಣವಾದ ಕೃಷಿ ಪದ್ಧತಿ ರೂಢಿಸುವತ್ತ ಗಮನ ಹರಿಸಿದೆ. ನಿಜಕ್ಕೂ, ಈ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಿದಂತೆ.
ಸರ್ಕಾರದ ನೀತಿ, ಕಾರ್ಯಕ್ರಮಗಳ ಜತೆಗೆ ರೈತರು ಕೂಡ ಜಾಗೃತರಾಗಿ ಒಂದಿಷ್ಟು ಬದಲಾವಣೆಗೆ ಒಡ್ಡಿಕೊಳ್ಳುವುದು, ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವುದು ಅನಿವಾರ್ಯ. ಮುಖ್ಯವಾಗಿ, ಬೇರೆಯವರು ಯಾವುದಾದರೂ ಒಂದು ಬೆಳೆ ಬೆಳೆದು ಅದಕ್ಕೆ ಉತ್ತಮ ಬೆಲೆ ಸಿಕ್ಕಾಗ ಉಳಿದ ರೈತರು ಅದನ್ನೇ ಬೆಳೆಯಲು ಮುಂದಾಗುತ್ತಾರೆ. ಫಸಲು ಬರುವ ಸಮಯದಲ್ಲಿ ಈ ಬೆಳೆಗೆ ಮಾರುಕಟ್ಟೆ ಸ್ಥಿತಿ ಹೇಗಿರುತ್ತದೆ, ಬೇಡಿಕೆ ಇರುತ್ತದೆಯೋ ಇಲ್ಲವೋ, ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಬಹುತೇಕ ರೈತರು ಯೋಚನೆ ಮಾಡುವುದೇ ಇಲ್ಲ. ಅದೇ ರೀತಿ ಯಾರಾದರೂ ಒಬ್ಬ ರೈತ ಕುರಿ-ಮೇಕೆ ಸಾಕಿ ಆರ್ಥಿಕವಾಗಿ ಸದೃಢನಾಗಿದ್ದರೆ ಉಳಿದ ಕೃಷಿಕರೂ ಅದನ್ನೇ ಅನುಕರಿಸಲು ಮುಂದಾಗುತ್ತಾರೆ. ಅದರಲ್ಲಿರುವ ಸಮಸ್ಯೆಗಳೇನು, ಆ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು, ಲಾಭ ತರುವ ಮಾಗೋಪಾಯಗಳೇನು ಎಂಬುದರ ಬಗ್ಗೆ ಅಧ್ಯಯನ ಮಾಡುವ ಗೋಜಿಗೂ ಹೋಗುವುದಿಲ್ಲ. ಈ ರೀತಿಯ ಅಂಧಾನುಕರಣೆಯೇ ರೈತರು ನಷ್ಟ ಅನುಭವಿಸುವುದಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ
ಮನೋಭಾವದಿಂದ ಕೃಷಿಕರು ಹೊರಬಂದು, ಮಾರುಕಟ್ಟೆ ಅಧ್ಯಯನ, ಭವಿಷ್ಯದ ಅಂದಾಜು ಮುಂತಾದವುಗಳನ್ನು ರೂಢಿಸಿಕೊಳ್ಳುವುದು ಒಳಿತು. ಇದರಿಂದ ನಷ್ಟ ತಪ್ಪಿ, ಲಾಭದತ್ತ ಮುಖಮಾಡಲು ಸಾಧ್ಯವಾಗುತ್ತದೆ.