

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನು ವಿರೋಧಿಸಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೂ ಕಾರಣವಾಗಿದೆ. ಆದರೆ ಇದೇ ಪ್ರತಿಭಟನೆಯಲ್ಲಿ ಮಾನವೀಯ ಮೌಲ್ಯಗಳನ್ನೂ ಎತ್ತಿ ಹಿಡಿದಿರುವ ಘಟನೆಗಳು ನಡೆದಿವೆ.
ಇಂದು ದೇಶಾದ್ಯಂತ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ ಅವರ 551ನೇ ಜಯಂತಿ ಆಚರಿಸಲಾಗುತ್ತಿದೆ. ದೆಹಲಿ ರೈತ ಹೋರಾಟದಲ್ಲಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಬಹುತೇಕರು ಪಂಜಾಬ್ ಮೂಲದವರಾಗಿದ್ದಾರೆ. ಸಿಖ್ ಧರ್ಮದವರಾಗಿರುವ ಈ ರೈತರು ಹೋರಾಟದ ಮಧ್ಯೆಯೂ ಗುರುನಾನಕ್ ಜಯಂತಿ ಆಚರಿಸಿದ್ದಾರೆ. ಈ ಶುಭ ದಿನದಂದು ಪೊಲೀಸರು ಸೇರಿ ಸುತ್ತ ಮುತ್ತಲಿದ್ದ ಪ್ರತಿಯೊಬ್ಬರಿಗೂ ಪ್ರಸಾದ ವಿತರಣೆ ಮಾಡುವ ಮೂಲಕ ದಿನಾಚರಣೆ ಆಚರಿಸಲಾಗಿದೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನು ವಿರೋಧಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರರಾಜಧಾನಿಗೆ ಮುತ್ತಿಗೆ ಹಾಕುವ ಪ್ರಯತ್ನದಲ್ಲಿದ್ದಾರೆ. ಈ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿರಿಸಿದೆ. ರಾಜಧಾನಿ ಪ್ರವೇಶದ ಐದು ಪ್ರವೇಶದ್ವಾರಗಳನ್ನು ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಪ್ರತಿಭಟನೆಯನ್ನು ಸ್ಥಳಾಂತರಿಸಲು ಸರ್ಕಾರ ಮಾಡಿರುವ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ. (ಏಜೆನ್ಸೀಸ್)