

ಶಿವಮೊಗ್ಗ: ನಗರದಲ್ಲಿ ಮಾ.20ರಂದು ನಡೆಯುವ ರೈತರ ಮಹಾ ಪಂಚಾಯತ್ ಬೃಹತ್ ಪ್ರತಿಭಟನೆಗೆ ಶಿವಮೊಗ್ಗ ಎಪಿಎಂಸಿ ತರಕಾರಿ ವರ್ತಕರ ಸಂಘ ಬೆಂಬಲ ಸೂಚಿಸಿದೆ.
ಎಪಿಎಂಸಿ ಯಾರ್ಡ್‌ನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ರೈತರು ಮತ್ತು ವ್ಯಾಪಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಎನ್.ರಮೇಶ್, ರೈತರ ಮಹಾಸಂಗ್ರಾಮಕ್ಕೆ ಬೆಂಬಲಿಸದಿದ್ದರೆ ಭವಿಷ್ಯದಲ್ಲಿ ಎಪಿಎಂಸಿ ತರಕಾರಿ ಮಂಡಿಗಳಿಗೆ ಬಾಗಿಲು ಹಾಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತ ಹೋರಾಟಕ್ಕೆ ವರ್ತಕರ ಸಂಪೂರ್ಣ ಬೆಂಬಲವಿದೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ರೈತರಿಗೆ ಬೇಡ ಅಂದ ಕಾಯ್ದೆ ಮಾಡೋಕೆ ಇವರ‌್ಯಾರು, ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಲ್ಲ. ಕಾರ್ಪೊರೇಟ್ ಸರ್ಕಾರವಾಗಿದೆ. ರೈತರ ಕಮಿಟಿ ರದ್ದು ಮಾಡಿ ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.
ನಾವು ರೈತರು ಆರ್ಥಿಕ ಅವಶ್ಯಕತೆಗನುಗುಣವಾಗಿ ಸಾಲ ಪಡೆಯುತ್ತೇವೆ. ಇವರು ಸಾಲ ಕೊಟ್ಟಂತೆ ಮಾಡಿ ಕಾರ್ಪೊರೇಟ್ ವ್ಯವಸ್ಥೆ ಮಾಡಲು ಹೊರಟಿದೆ ಎಂದು ದೂರಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ರೈತ ನಾಯಕ ಕೆ.ಟಿ.ಗಂಗಾಧರ್, ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೇಶ್, ಮಾಜಿ ಉಪ ಮೇಯರ್ ಎಚ್.ಪಾಲಾಕ್ಷಿ ಹಾಗೂ ರೈತ ಮುಖಂಡರು, ಮಂಡಿ ವರ್ತಕರು ಉಪಸ್ಥಿತರಿದ್ದರು.