ಹೆದ್ದಾರಿಯಲ್ಲಿ ರೈತರ ಕಿಚ್ಚು, ಚಕ್ಕಾ ಜಾಮ್​ ಎಲ್ಲೆಲ್ಲೆ ಹೇಗಿದೆ?

protest 3
Published on

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ರೈತರ ಸಂಘಟನೆಗಳು ರಸ್ತೆ ತಡೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸುತ್ತಿವೆ.

ಇಂದು(ಶನಿವಾರ) ದೇಶಾದ್ಯಂತ ರ್ಸತೆ ತಡೆ ನಡೆಸುವಂತೆ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ನೀಡಿದ್ದು, ಮಧ್ಯಾಹ್ನ 12ರಿಂದ ಅಪರಾಹ್ನ 3ರವರೆಗೆ ಚಕ್ಕಾ ಜಾಮ್​(ರಸ್ತೆ ತಡೆ ಪ್ರತಿಭಟನೆ) ನಡೆಸುವಂತೆ ತಿಳಿಸಿದೆ. ಅದರಂತೆ ರಾಜ್ಯಾದ್ಯಂತ ರಸ್ತೆ ಪ್ರತಿಭಟನೆ ಕಾವೇರಿದ್ದು, ಸಹಸ್ರಾರು ಸಂಖ್ಯೆಯಲ್ಲಿ ರೈತರು ಹೆದ್ದಾರಿ ಬಳಿ ಜಮಾಯಿಸಿದ್ದಾರೆ. ಬೆಂಗಳೂರಿನ ಯಲಹಂಕಾದಲ್ಲಿ ಕುರುಬೂರು ಶಾಂತಕುಮಾರ್​ ನೇತೃತ್ವದಲ್ಲಿ ರಸ್ತೆಯಲ್ಲಿ ಕುಳಿತು ರೈತರು ಪ್ರತಿಭಟನೆ ನಡೆಸಿದ್ದು, ಕುರುಬೂರು ಶಾಂತಕುಮಾರ್​ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲಹಂಕಾ ಸುತ್ತಮುತ್ತ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇದೇ ರೀತಿ ರಾಜ್ಯಾದ್ಯಂತ ರೈತರ ಹೆದ್ದಾರಿ ಕಿಚ್ಚು ಹೇಗಿದೆ? ಎಂಬುದರ ಡಿಟೇಲ್ಸ್​ ಇಲ್ಲಿದೆ.

ರಾಮನಗರ

ಬಿಡದಿಯಲ್ಲಿ ಕೇವಲ 5-10 ನಿಮಿಷ ಮಾತ್ರ ರಸ್ತೆ ತಡೆಗೆ‌ ಮೌಖಿಕವಾಗಿ ಪೊಲೀಸರು ಅನುಮತಿ ನೀಡಿದರು. ಅದರಂತೆ ಸಮಯ ಮೀರಿದರು ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತಿದ್ದರು. ಕೂಡಲೇ ಅವರನ್ನೆಲ್ಲ ರಸ್ತೆಯಿಂದ ಹೊರ ಕಳಿಸಿದ ಪೊಲೀಸರು, ಹೊರಗೆ ಪ್ರತಿಭಟನೆ ನಡೆಸಿಕೊಳ್ಳಿ, ಸಂಚಾರಕ್ಕೆ ತೊಂದರೆ ಬೇಡ ಎಂದು ಮನವೊಲಿಸುವಲ್ಲಿ ತಲ್ಲೀನರಾಗಿದ್ದರು. ಒಂದು ವೇಳೆ ಸೂಚನೆ ದಿಕ್ಕರಿಸಿ ರಸ್ತೆ ಬಂದ್ ಮಾಡಿದರೆ ವಶಕ್ಕೆ ಪಡೆಯುವುದಾಗಿ ಎಚ್ಚರಿಸಿದ್ದಾರೆ. ರಾಮನಗರದಲ್ಲಿ ರೈತರಿಂದ ಹೆದ್ದಾರಿ ರಸ್ತೆ ತಡೆ ಹಿನ್ನೆಲೆ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವ ವಾಹನಗಳಿಗೆ ರಾಮನಗರದ ಕನಕಪುರ ಸರ್ಕಲ್​ನಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ. ಕನಕಪುರ ರಸ್ತೆ ಮೂಲಕ ಬೆಂಗಳೂರು ಕಡೆಗೆ ವಾಹನ ಸಂಚಾರ ಮಾಡುತ್ತಿವೆ.

ಬಾಗಲಕೋಟೆ

ರಾಷ್ಟ್ರ ಧ್ವಜ, ರೈತ ಧ್ವಜ, ಕನ್ನಡ ಧ್ವಜ ಹಿಡಿದು ಬಂದ ಹುನಗುಂದ ಇಳಕಲ್ ಭಾಗದ ರೈತರು ತಹಸೀಲ್ದಾರ್​ ಕಚೇರಿತಯಿಂದ ಮೆರವಣಿಗೆ ಹೊರಟು ಹೈವೇ ಬಂದ್ ಮಾಡಿದರು. ಸೊಲ್ಲಾಪುರ-ಮಂಗಳೂರ ಹೆದ್ದಾರಿ ಬಂದ್ ಮಾಡಿದ ರೈತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡಿತು.

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಎನ್.ಎಚ್ 44 ತಡೆರು ಪ್ರತಿಭಟಿಸುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದರು.

ಆನೇಕಲ್

ಹುಸ್ಕೂರು ಸಮೀಪದ ಸಿಂಗೇನ ಅಗ್ರಹಾರ ಮಾರುಕಟ್ಟೆಯಲ್ಲೂ ಪ್ರತಿಭಟನೆ ನಡೆಯಿತು. ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಇಳಿದ ವರ್ತಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೃಷಿ ಮಸೂದೆಯನ್ನು ವಾಪಸು ಪಡೆಯುವಂತೆ ಆಗ್ರಹಿಸಿದರು.

ತುಮಕೂರು

ಗುಬ್ಬಿ ಗೇಟ್ ಬಳಿಯ ಬಿಎಚ್ ರಸ್ತೆ ಬೈಪಾಸ್ ಜಂಕ್ಷನ್​ನಲ್ಲಿ ಜಮಾವಣೆಗೊಂಡ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ತಡೆಗೆ ಬಿಡದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರೈತರಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚಿತ್ತು.

ಮೈಸೂರು

ರಿಂಗ್ ರಸ್ತೆಯ ಬಂಡೀಪಾಳ್ಯ ವೃತ್ತದಲ್ಲಿ ದನಕರು, ಕುರಿಗಳೊಂದಿಗೆ ಜಮಾಯಿಸಿದ ರೈತರು ರಸ್ತೆಯಲ್ಲೇ ಠಿಕಾಣಿ ಹೂಡಿರು. ರೈತರೊಬ್ಬರು ಕಬ್ಬಿಣದ ಸರಪಳಿ ಬಿಗಿದುಕೊಂಡು ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆ ಸ್ಥಳದಲ್ಲಿ ಪೊಲೀಸ್​ ಸರ್ಪಗಾವಲಿದೆ. ಮೈಸೂರು ಕೊಲಂಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್​ನಲ್ಲಿ ಜಮಾಯಿಸಿದ ರೈತರು, ಬೆಂಗಳೂರು- ಮೈಸೂರು ನಡುವೆ ರಸ್ತೆ ತಡೆಗೆ ಮುಂದಾದರು. ಪೊಲೀಸರ ವಿರೋಧ ಲೆಕ್ಕಿಸದೆ ಬಂಡೀಪಾಳ್ಯ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಅಡುಗೆ ಮಾಡಲು ರೈತರು ಸಿದ್ಧತೆ ನಡೆಸಿದ್ದರು.

ಬೆಳಗಾವಿ

ಕೃಷಿ ಮಸೂದೆಗಳನ್ನ ವಾಪಾಸ್ ಪಡೆಯುವಂತೆ ಭಿತ್ತಿಪತ್ರ ಹಿಡಿದು ಬಂದ ರೈತರು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ನಾಕಾ ಬಳಿಯ ಹೆದ್ದಾರಿ ಬಳಿ ಪ್ರತಿಭಟನೆ ನಡೆಸಿದರು.

ಕಲಬುರಗಿ

ಕಲಬುರಗಿಯ ರಾಮಮಂದಿರ ಸರ್ಕಲ್ ಬಳಿ ಬೀದರ್-ಶ್ರೀರಂಗಪಟ್ಟಣ ಮಾರ್ಗದ ಹೆದ್ದಾರಿ ಬಂದ್​ ಮಾಡಿದ ರೈತರು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಮಾಜಿ ಶಾಸಕ ಬಿ.ಆರ್. ಪಾಟೀಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಕೆಬಿಎನ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.

ಧಾರವಾಡ

ಧಾರವಾಡದ ಯರಿಕೊಪ್ಪ ಬೈಪಾಸ್ ಬಳಿ ಪುಣೆ-ಬೆಂಗಳೂರು ಎನ್.ಎಚ್. 4 ನಲ್ಲಿ ಟ್ರ್ಯಾಕ್ಟರ್ ಅನ್ನು ಅಡ್ಡ ನಿಲ್ಲಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಹೀಗೆ ರಾಜ್ಯದ ಎಲ್ಲ ಜಿಲ್ಲೆಯಲ್ಲೂ ರೈತರಿಂದ ರಸ್ತೆ ತಡೆ ಪ್ರತಿಭಟನೆ ನಡೆಯುತ್ತಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿದೆ. ಇದು ಭಾನುವಾರ ಮಧ್ಯಾಹ್ನ 12.30ರ ವರೆಗಿನ ಚಿತ್ರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net