ಸುಧಾರಿತ ಬೇಸಾಯದಿಂದ ರೈತರು ಸಮೃದ್ಧಿ

krishi
ರಿಪ್ಪನ್‌ಪೇಟೆ ಸಮೀಪದ ಯಳಗಲ್ಲಿನಲ್ಲಿ ಕೃಷಿ ವಿವಿಯ ರೈತ ಕೇಂದ್ರದ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಮಾತನಾಡಿದರು. ಚಂದ್ರಮೌಳಿ, ಉಮೇಶ್ ಕಲಗೋಡು, ಮಂಜಪ್ಪ ಇತರರಿದ್ದರು.
Published on

ರಿಪ್ಪನ್‌ಪೇಟೆ: ಮಲೆನಾಡಿನಲ್ಲಿ ಬೇಸಾಯ ಕ್ರಮಗಳು ಬದಲಾಗಬೇಕು. ಬೆಳೆಗಳಲ್ಲಿ ಅನುಸರಿಸುತ್ತಿರುವ ಅವೈಜ್ಞಾನಿಕ ಬೇಸಾಯ ಕ್ರಮಗಳಿಂದ ರೋಗ ಮತ್ತು ಕೀಟಗಳ ಬಾಧೆ ಹೆಚ್ಚುತ್ತಿದ್ದು ಇಳುವರಿ ಕುಂಠಿತಗೊಳ್ಳುತ್ತಿದೆ. ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ರೈತರು ಸಮೃದ್ಧಿ ಆಗಬೇಕಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು.
ಸಮೀಪದ ಕೋಡೂರಿನ ಯಳಗಲ್ಲಿನಲ್ಲಿ ಕೃಷಿ ವಿವಿಯ ಸಹ್ಯಾದ್ರಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇರುವ ಭೂಮಿಯಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬೆಳೆದು ಲಭ್ಯವಿರುವ ಸಂಪನ್ಮೂಲ ಹಾಗೂ ಭೂಮಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಪ್ರಗತಿ ಸಾಧಿಸಬೇಕಿದೆ ಎಂದರು.
ಅಡಕೆಯ ಮುಖ್ಯ ರೋಗಗಳಾದ ಎಲೆಚುಕ್ಕೆ ರೋಗ, ಕೊಳೆರೋಗ, ಅಣಬೆ ರೋಗಗಳ ಲಕ್ಷಣಗಳನ್ನು ರೋಗ ಬಂದಿರುವ ಗಿಡದ ಭಾಗಗಳನ್ನು ಗೋಡೆಗೆ ಅಂಟಿಸಿ ತೋರಿಸುವುದರ ಜತೆಗೆ ನಿರ್ವಹಣೆಯ ಮಾಹಿತಿ ಬರೆಯಲಾಗಿತ್ತು. ಬೇರುಹುಳುವಿನ ಜೀವನಚಕ್ರ ಗೋಡೆಯ ಮೇಲೆ ಚಿತ್ರಿಸಿರುವುದು ಗಮನಾರ್ಹವಾಗಿತ್ತು. ಇದೇ ರೀತಿಯಲ್ಲಿ ಭತ್ತ, ಕಾಳುಮೆಣಸಿನಲ್ಲಿ ಕಂಡುಬರುವ ರೋಗ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣೆಯ ಮಾಹಿತಿ ಬಿಂಬಿಸಲಾಗಿತ್ತು. ರಸಮೇವು ತಯಾರಿಕೆಯ ವಿಧಾನ, ಹಸು ಹಾಗೂ ಎಮ್ಮೆಯ ವಿವಿಧ ತಳಿಗಳು ಹಾಗೂ ಅವುಗಳಲ್ಲಿ ಕಂಡುಬರುವ ರೋಗಗಳು, ಲಸಿಕೆ ಹಾಗೂ ಸ್ವಚ್ಛ ಹಾಲಿನ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಚಂದ್ರಮೌಳಿ, ಗ್ರಾಪಂ ಅಧ್ಯಕ್ಷ ಉಮೇಶ್ ಕಲಗೋಡು, ಸದಸ್ಯರಾದ ಮಂಜಪ್ಪ , ಶ್ಯಾಮಲಾ, ಮುಖ್ಯಶಿಕ್ಷಕ ಪರಮೇಶ್, ಪ್ರಮುಖರಾದ ಲೋಕೇಶ್, ಡಾ. ಜ್ಯೋತಿ ರಾಥೋಡ್, ಡಾ. ಶ್ರುತಿ, ಡಾ. ಕಿರಣ್ ಕುಮಾರ್, ಡಾ. ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net