ಬೀಜ ಮಸೂದೆಗೆ ರೈತರ ವಿರೋಧ

raitha snga jan 30 2020
Published on

ಬೆಂಗಳೂರು: ಬಿತ್ತನೆ ಬೀಜಗಳ ನೋಂದಣಿ ಸೇರಿ ಅವುಗಳ ವಿತರಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಬೀಜಗಳ ಮಸೂದೆ 2019ಕ್ಕೆ ರೈತ ಸಂಘ ಮತ್ತು ಕೃಷಿ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಬೀಜದ ಸ್ವಾತಂತ್ರ್ಯಕ್ಕಾಗಿ ರೈತರ ಹೋರಾಟ’ ವಿಚಾರ ಸಂಕಿರಣದಲ್ಲಿ ‘ಬೀಜ ಮಸೂದೆ 2019’ ಕುರಿತು ರ್ಚಚಿಸಲಾಯಿತು. ಮಸೂದೆ ಜಾರಿಯಾದರೆ ರೈತರಿಗೆ ಹೆಚ್ಚಿನ ಸಮಸ್ಯೆಗಳಾಗುತ್ತವೆ. ಹೀಗಾಗಿ ಮಸೂದೆ ಜಾರಿಯಾಗದಂತೆ ತಡೆಯಬೇಕು ಎಂದು ಸಭೆ ನಿರ್ಣಯಿಸಿತು.

ಬೀಜ ಮಸೂದೆ ಪ್ರಕಾರ ಎಲ್ಲ ಬಿತ್ತನೆ ಬೀಜಗಳನ್ನು ನೋಂದಣಿ ಮಾಡಿಕೊಳ್ಳಬೇಕಿದೆ. ಆದರೆ, ರೈತರ ಬಳಿಯಿರುವ ಸಾಂಪ್ರದಾಯಿಕ ಬಿತ್ತನೆ ಬೀಜಗಳ ನೋಂದಣಿ ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳು ತಮ್ಮಲ್ಲಿರುವ ಬಿಟಿ ಬೀಜಗಳನ್ನು ನೋಂದಣಿ ಮಾಡಿಕೊಳ್ಳುತ್ತವೆ. ಅದನ್ನು ಮಾರಾಟ ಮಾಡಲು ಅವಕಾಶ ಪಡೆಯುತ್ತವೆ. ಇದರಿಂದ ರೈತರ ಬಿತ್ತನೆ ಬೀಜಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲವಾಗುತ್ತದೆ. ಈ ಗೊಂದಲವನ್ನು ಮಸೂದೆಯಲ್ಲಿ ಮೊದಲು ನಿವಾರಿಸಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಆಗ್ರಹಿಸಿದರು.

ಲಾಭದ ಅಂಶ ರೈತರಿಗೆ ಸಿಗಬೇಕು: ಯಾವುದೇ ಸಂಸ್ಥೆ ಬೀಜದಿಂದ ಬರುವ ಲಾಭಾಂಶವನ್ನು ರೈತರಿಗೆ ನೀಡಬೇಕು ಎಂಬ ಕರಾರು ಹಾಕಬೇಕು. ಬೀಜಗಳು ಮಾರುಕಟ್ಟೆಗೆ ಬರುವ ಮುನ್ನ ರೈತರು, ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ ಪರೀಕ್ಷೆಗೊಳಪಡಿಸಬೇಕು. ಇಲ್ಲದಿದ್ದರೆ, ಕಳಪೆಬೀಜ ವಿತರಿಸಿ ವಂಚಿಸುವ ಸಾಧ್ಯತೆ ಇರುತ್ತದೆ. ರೈತರ ಹಿತರಕ್ಷಣೆಯ ಅಂಶಗಳು ಮಸೂದೆಯಲ್ಲಿ ಹೆಚ್ಚಾಗಿ ಅಳವಡಿಕೆಯಾಗಬೇಕು ಎಂದು ಹೇಳಿದರು.

ಬಿತ್ತನೆ ಬೀಜಗಳ ಸಂರಕ್ಷಣೆಗೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಬೇಕು. ಅದರಿಂದ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ಜತೆಗೆ, ಬಿತ್ತನೆ ಬೀಜ ಸಂರಕ್ಷಿಸಬಹುದು. ಆದರೆ, ಕೇಂದ್ರ ಸರ್ಕಾರ ಅದರ ಬದಲು ಖಾಸಗಿ ಸಂಸ್ಥೆಗೆ ನೆರವಾಗುವ ರೀತಿಯಲ್ಲಿ ಮಸೂದೆ ರೂಪಿಸಿದೆ. | ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಿತ್ತನೆ ಬೀಜ ಮಸೂದೆಯಿಂದ ರೈತರಿಗೆ ಅನುಕೂಲವೂ ಇದೆ. ಆದರೆ, ಆ ಬಗ್ಗೆ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಿದೆ. ಉಳಿದೆಲ್ಲ ವಿಷಯಗಳಿಗಿಂತ ಬೀಜ ಸಂಶೋಧನೆ ಸೇರಿ ಇನ್ನಿತರ ಅಂಶಗಳನ್ನು ಮಸೂದೆ ಒಳಗೊಂಡಿದೆ. ಅವುಗಳು ರೈತರಿಗೆ ಸಮರ್ಪಕವಾಗಿ ತಲುಪುವಂತೆ ಮಾಡುವ ಕೆಲಸವಾಗಬೇಕು. | ಡಾ. ಶರಣ್ ಅಂಗಡಿ ಹಿರಿಯ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net