ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ಪಟ್ಟಣದಲ್ಲಿ ಭಾನುವಾರ ಪಾದಯಾತ್ರೆ ಆರಂಭಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ದಿಲೀಪ, ಜಿಲ್ಲಾ ಕಾರ್ಯದರ್ಶಿ ಮಾಧು, ಬೊಮ್ಮನಹಳ್ಳಿ ಲೋಕೇಶ, ಕುಮಾರ್ ಇತರರು ಇದ್ದರು
ಕೆರೆಗಳಿಗೆ ನೀರು ತುಂಬಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಗುಂಡ್ಲುಪೇಟೆ:
ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ಆರಂಭಿಸಿದರು.
ಭಾನುವಾರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿದ ಕಾರ್ಯಕರ್ತರು ತೆರಕಣಾಂಬಿ ಮಾರ್ಗವಾಗಿ ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡುವರು.
ಚಾಮರಾಜನಗರ ಜಿಲ್ಲೆ ಮತ್ತು ಗುಂಡ್ಲುಪೇಟೆ ತಾಲೂಕಿನ ರೈತರು ಭೀಕರ ಬರಗಾಲದ ಸಂಕಷ್ಟದಲ್ಲಿರುವುದರಿಂದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆಲಂಬೂರು ಏತ ನೀರಾವರಿಯಿಂದ ಉತ್ತೂರು, ವಡ್ಡಗೆರೆಯಿಂದ ಬೊಮ್ಮನಹಳ್ಳಿ ಸೇರಿದಂತೆ ಗುಂಡ್ಲುಪೇಟೆ ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಗಾಂಧಿ ಗ್ರಾಮ ಏತ ನೀರಾವರಿಯಿಂದ ಕಮರಹಳ್ಳಿ, ಅಗತಗೌಡಹಳ್ಳಿ, ರಾಘವಾಪುರ, ಮಳವಳ್ಳಿ ಭಾಗದ ಕೆರೆಗಳಿಗೆ ತಕ್ಷಣ ನೀರು ತುಂಬಿಸಬೇಕು. ಗುಂಡ್ಲುಪೇಟೆ ತಾಲೂಕಿನ 110 ಕೆರೆಗಳ ಯೋಜನೆ ಡಿಪಿಆರ್ ಆಗಿ ಭೂಮಿಪೂಜೆ ನೆರವೇರಿಸಿರುವ ಕಾಮಗಾರಿಯನ್ನು ತಕ್ಷಣ ಪ್ರಾರಂಬಿಸಬೇಕು ಎಂಬ ಹಕ್ಕೊತ್ತಾಯಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ತಿಳಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ದಿಲೀಪ, ಜಿಲ್ಲಾ ಕಾರ್ಯದರ್ಶಿ ಮಾಧು, ಬೊಮ್ಮನಹಳ್ಳಿ ಲೋಕೇಶ, ಕುಮಾರ್ ಇತರರು ಇದ್ದರು