ಬೆಳೆ ಸರ್ವೇಗೆ ಬಂದ ವಿಮಾ ಕಂಪನಿ, ಕೃಷಿ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ರೈತರು

29-RNR-08
Published on


ರಾಣೆಬೆನ್ನೂರ: ರೈತರ ಬೆಳೆ ಸರ್ವೇ ಮಾಡಲು ಬಂದ ವಿಮಾ ಕಂಪನಿ ಅಧಿಕಾರಿ ಹಾಗೂ ಕೃಷಿ ಅಧಿಕಾರಿಗಳನ್ನು ರೈತರು ಪ್ರತಿಭಟನೆ ನಡೆಸಿ ವಾಪಸ್ ಕಳುಹಿಸಿದ ಘಟನೆ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರೈತರ ಬೆಳೆ ಸರ್ವೇ ಮಾಡುವ ಸಲುವಾಗಿ ವಿಮಾ ಕಂಪನಿಯ ಅಧಿಕಾರಿಗಳು ರೈತರು ಜಮೀನುಗಳಿಗೆ ಭೇಟಿ ನೀಡುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ರೈತರು, ಮಳೆ ಕೊರತೆಯಿಂದ ಬೆಳೆ ಹಾಳಾಗಿವೆ. ನೀವು ಒಬ್ಬ ರೈತರ ಬೆಳೆ ಸರಿಯಾಗಿ ಬಂದಿದೆ ಎಂದು ಸುಳ್ಳು ಹೇಳಿ ರೈತರಿಗೆ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದಾರೆ.
ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮಳೆಯಾಶ್ರಿತ ಬೆಳೆಗಳು ನಾಶಗೊಂಡಿವೆ. ಇಂತಹ ಸಂದರ್ಭದಲ್ಲಿ ಬೆಳೆವಿಮೆ ಪಾವತಿಸಿದ ರೈತರಿಗೆ ಆಸರೆಯಾಗಬೇಕಿದ್ದ ಇನ್ಸೂರನ್ಸ್ ಕಂಪನಿ ಮತ್ತೆ ಸರ್ವೇ ಕಾರ್ಯ ಮಾಡಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಪ್ರತಿಭಾರಿ ರೈತರಿಗೆ ಮೋಸ ಮಾಡುತ್ತಿದ್ದಾರೆ.
ಆದ್ದರಿಂದ ವಿಮೆ ಹಣ ಪಾವತಿಸದಂತೆ ಏನಾದರು ನೆಪ ಹೇಳಿ ಈ ಬಾರಿ ಹಣ ಬಿಡುಗಡೆ ಮಾಡದೆ ತಪ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆ ವಿಮೆ ನೊಂದಾಯಿಸಿದ ರೈತರಿಗೆ ಪರಿಹಾರ ವಿತರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರಾದ ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಭೀರಪ್ಪ ತೊಟಗಂಟೆ, ಬಸವರಾಜ ಯಲ್ಲಕ್ಕನವರ, ನಾಗನಗೌಡ ಪಾಟೀಲ, ನಿಂಗರಡ್ಡಿ ಬಳ್ಳಾರಿ, ಗಂಗವ್ವ ಜಾನಕ್ಕನವರ, ಶಾಂತವ್ವ ಹಿರೇಮರದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net