

ಹೊಸನಗರ: ಅಡಕೆ ಬೆಳೆ ಜತೆಗೆ ಕಾಳುಮೆಣಸು, ಕೋಕೋ, ಜಾಯಿಕಾಯಿ ಮತ್ತಿತರ ಬೆಳೆಗಳು ರೈತರಿಗೆ ಲಾಭ ತಂದುಕೊಡುತ್ತವೆ. ಈ ಬಗ್ಗೆ ಕೃಷಿಕರು ಆಸಕ್ತಿ ತೋರಬೇಕು ಎಂದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜ್ ಅಡಿವೆಪ್ಪರ್ ಸಲಹೆ ನೀಡಿದರು.
ತಾಲೂಕು ಕೃಷಿಕ ಸಮಾಜ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಅಡಕೆ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಳೆದೊಂದು ದಶಕದಿಂದ ಅಡಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದೆ. ಬೆಳೆ ಜಾಸ್ತಿಯಾದರೂ ಧಾರಣೆ ಕುಸಿಯದಿರುವುದು ಸಮಾಧಾನಕರ ವಿಷಯ. ಜತೆಗೆ ಬೆಳೆಗಳ ನಿರ್ವಹಣಾ ವೆಚ್ಚವೂ ಏರಿಕೆಯಾಗಿದೆ. ತೋಟಗಾರಿಕಾ ಬೆಳೆಗಳಿಗೆ ಇತ್ತೀಚೆಗೆ ಕಾಡುತ್ತಿರುವ ರೋಗಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದರು.
ಲಾಭದಾಯಕವಾದ ಪರ್ಯಾಯ ಬೆಳೆ ಸಿಗದ ಕಾರಣಕ್ಕೆ ರೈತರು ಅನಿವಾರ್ಯವಾಗಿ ಅಡಕೆ ಬೆಳೆಯುತ್ತಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕುಡಿಯಲು ನೀರಿಲ್ಲದ ಪ್ರದೇಶಗಳಲ್ಲೂ ಅಡಕೆ ತೋಟ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಮಣ್ಣು ಹಾಗೂ ಸೂಕ್ತ ಪರಿಸರ ದೊರೆಯದಿದ್ದಲ್ಲಿ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಅಡಕೆಗೆ ಅಂಟಿದ ಹಾನಿಕಾರಕ ಎಂಬ ಕಳಂಕವನ್ನು ಹೋಗಲಾಡಿಸಬೇಕು. ಇದರಿಂದ ಬೆಳೆ, ಮಾರಾಟಕ್ಕೆ ಅಡ್ಡಿಯಾಗಿದೆ. ರೈತರು ಸಹ ಅತಿಯಾದ ರಾಸಾಯನಿಕ ಬಳಕೆ, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಅಡಕೆ ಸಂಸ್ಕರಿಸುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ್ ಮಾತನಾಡಿ, ಅಡಕೆಗೆ ಎಲೆಚುಕ್ಕೆ, ಹಿಡಿಮುಂಡಿಗೆ ರೋಗ, ಬೇರು ಹುಳು ಸಮಸ್ಯೆಯಿಂದ ಬೆಳೆಗಾರರು ಕಂಗೆಟ್ಟಿದ್ದಾರೆ. ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕು ಎನ್ನುವ ಉದ್ದೇಶಕ್ಕೆ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಅಡಕೆ ಬೆಳೆಯಲ್ಲಿ ರೋಗ ನಿರ್ವಹಣೆ ಕುರಿತು ಡಾ. ಸ್ವಾತಿ, ಡಾ. ಸುದೀಪ್, ಡಾ. ಕಿರಣ್‌ಕುಮಾರ್ ಮಾಹಿತಿ ನೀಡಿದರು. ಮ್ಯಾಮ್ಕೋಸ್ ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಧರ್ಮಪ್ಪ, ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ, ಕೃಷಿ ಸಹಾಯಕ ಮಾರುತಿ, ಮಹೇಶ ಇತರರಿದ್ದರು.