

ರೈತರನ್ನು ಕಳೆದೆರಡು ವರ್ಷದಿಂದ ಬರ, ನೆರೆ ಎರಡೂ ಕಾಡುತ್ತಿವೆ. ಬೆಳೆದ ಬೆಳೆಗಳೆಲ್ಲ ಪ್ರಕೃತಿ ವಿಕೋಪದಿಂದ ಕಣ್ಮುಂದೆ ಹಾಳಾಗಿ, ರೈತ ಸಮುದಾಯ ಧೃತಿಗೆಟ್ಟಿತು. ಇನ್ನೇನು ಬೆಳೆ ಕೈ ಸೇರುತ್ತದೆ ಎಂಬ ಹಂತದಲ್ಲೇ ಕಾಡಿದ ವಿಕೋಪಗಳು ನಿರೀಕ್ಷೆಗಳನ್ನೆಲ್ಲ ಬುಡಮೇಲಾಗಿಸಿದ್ದು ಗೊತ್ತಿರುವಂಥದ್ದೇ. ಮೇಲಾಗಿ ಬೆಲೆಕುಸಿತ ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಈ ಎಲ್ಲ ಸಮಸ್ಯೆಗಳಿಂದ ಕಂಗಾಲಾದ ಕೃಷಿಕ ಪರಿಹಾರದ ದಾರಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದದ್ದು ವಾಸ್ತವ. ಕೇಂದ್ರ ಮತ್ತು ರಾಜ್ಯದ ಬಜೆಟ್ ಮಂಡನೆ ಸಮೀಪಿಸುತ್ತಿರುವ ಹೊತ್ತಲ್ಲೇ ಸ್ವಾಭಾವಿಕವಾಗಿ ರೈತ ಸಮುದಾಯದಲ್ಲಿ ಒಂದಿಷ್ಟು ನಿರೀಕ್ಷೆಗಳು ಮೂಡಿವೆ. ಪ್ರಸಕ್ತ, ರಾಜ್ಯ ಸರ್ಕಾರ ಬೆಲೆಕುಸಿತ ತಡೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಆ ಮೂಲಕ ಕಷ್ಟದಲ್ಲಿರುವ ರೈತರ ಪಾಲಿಗೆ ಒಂದಿಷ್ಟು ನೆರವು ಸಿಗಲು ಸಾಧ್ಯವಾಗಲಿದೆ ಎನ್ನಬಹುದು.
ಭತ್ತ, ಶೇಂಗಾ, ತೊಗರಿ, ಬಿಳಿಜೋಳ, ರಾಗಿಗೆ ಬೆಂಬಲ ಬೆಲೆ ಅನ್ವಯವಾಗಲಿದೆ. ತಕ್ಷಣವೇ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್ಫೋರ್ಸ್ಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ, ಭತ್ತ, ತೊಗರಿಗೆ ಪ್ರೋತ್ಸಾಹಧನ ನೀಡಲು ಸಮಿತಿ ರಚಿಸಿರುವುದು ಉತ್ತಮ ಹೆಜ್ಜೆ. ಆದರೆ, ಕೇವಲ ಬೆಂಬಲ ಬೆಲೆ ಮಾತ್ರದಿಂದ ರೈತರ ಸಂಕಷ್ಟ ನೀಗಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರಿಯಬೇಕು. ಇಸ್ರೇಲ್ ಕೃಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿರುವ ರಾಜ್ಯದಲ್ಲಿ ಈ ದಿಶೆಯಲ್ಲಿ ಇನ್ನಷ್ಟು ಹೆಜ್ಜೆಗಳನ್ನು ಇರಿಸಬೇಕಿದೆ. ಕೇಂದ್ರ ಸರ್ಕಾರ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಹೊಸರೂಪ, ಮಧ್ಯವರ್ತಿಗಳ ಹಾವಳಿ ತಪ್ಪಿಸುವಿಕೆ ಸೇರಿ ಕೆಲ ಕ್ರಮಕ್ಕೆ ಮುಂದಾಗಿದೆ. ರಾಜ್ಯವೂ ಈ ಬಗ್ಗೆ ಗಮನ ಹರಿಸಬೇಕಿದೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರೆಸ್ ಕ್ಲಬ್ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡುತ್ತ ಉಪಯುಕ್ತ ಸಲಹೆ ನೀಡಿದ್ದಾರೆ. ‘ಕೃಷಿ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಬರಬೇಕು. ಅದಕ್ಕಾಗಿ, ರಾಜ್ಯ ಬಜೆಟ್ನಲ್ಲಿ ಕೃಷಿ ಕ್ಷೇತ್ರ ಮತ್ತು ಚಟುವಟಿಕೆಗೆ ನೆರವಾಗುವಂಥ ಮಹತ್ತರ ಯೋಜನೆ ಘೋಷಿಸಬೇಕು’ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ರೈತಪರ ಕಳಕಳಿ ನಿಜಕ್ಕೂ ಅವಶ್ಯ. ತಂತ್ರಜ್ಞಾನ ಮುಂದುವರಿದಿರುವ, ಕೃಷಿಗೆ ಪೂರಕ ಹಲವು ಅನ್ವೇಷಣೆಗಳು ಸಾಧ್ಯವಾಗಿರುವ ಈಗಿನ ಕಾಲಘಟ್ಟದಲ್ಲಿ ಕೃಷಿರಂಗವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ದೂರದೃಷ್ಟಿ ಮತ್ತು ಸೂಕ್ತ ಯೋಜನೆಯ ಅಗತ್ಯ ಇದೆ. ಮತ್ತು ಕರ್ನಾಟಕದಲ್ಲಿ ಅದಕ್ಕೆ ಪೂರಕವಾದ ಅವಕಾಶಗಳೂ ಇವೆ. ರೈತರ ಅಭಿವೃದ್ಧಿ ಎಂದಾಕ್ಷಣ ಬರೀ ಸಾಲಮನ್ನಾದಿಂದ ಅದು ಸಾಧ್ಯವಿಲ್ಲ. ಕೃಷಿಯಿಂದ ಹಲವರು ವಿಮುಖವಾಗುತ್ತಿರುವ ಸಂದರ್ಭದಲ್ಲಿ ರೈತರಲ್ಲಿ ಕೃಷಿ ಮತ್ತೆ ವಿಶ್ವಾಸ ಮೂಡಿಸುವಂತೆ, ಅವರ ಆದಾಯ ಹೆಚ್ಚಿಸುವಂತೆ ಮಾಡಬೇಕಿದೆ. ಪ್ರಭುತ್ವ ಮನಸ್ಸು ಮಾಡಿದರೆ ಇದೇನು ಅಸಾಧ್ಯವಲ್ಲ. ಮುಖ್ಯಮಂತ್ರಿಗಳೂ ಪ್ರಮಾಣವಚನದ ವೇಳೆ ರೈತರ ಬಗೆಗೆ ಕಾಳಜಿ ತೋರಿದ್ದಾರೆ. ಆ ಬದ್ಧತೆ ಬಜೆಟ್ನಲ್ಲೂ ಕಾಣುವಂತಾಗಲಿ. ಆ ಮೂಲಕ ಕೃಷಿರಂಗದ ದೀರ್ಘಾವಧಿ ಸಮಸ್ಯೆಗಳು ಕೊನೆಗೊಂಡು, ವಿಕಾಸದ ಪಥದಲ್ಲಿ ಸಾಗುವಂತಾಗಲಿ ಎಂಬುದು ಆಶಯ.