ಫಸಲ್ ಬಿಮಾ ಬೆಳೆ ವಿಮೆಗೆ ನೋಂದಣಿ ನೀರಸ ; ಕೈ ಸೇರದ ಕಳೆದ ವರ್ಷದ ಪರಿಹಾರ

Published on

ಚಿಕ್ಕಬಳ್ಳಾಪುರ: ಪ್ರಾಕೃತಿಕ ವಿಕೋಪ ಸೇರಿ ಇನ್ನಿತರ ಸಂದರ್ಭದಲ್ಲಿ ಪರಿಹಾರ, ಸವಲತ್ತು ಒದಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಾರಿ ಮಾಡಲಾಗಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಬೆಳೆ ವಿಮೆಗೆ ಜಿಲ್ಲೆಯಲ್ಲಿ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಳೆದ ವರ್ಷದ 17,256 ರೈತರು ನೋಂದಣಿ ಮಾಡಿಕೊಂಡಿದ್ದರು, ಆದರೆ, ಪ್ರಸಕ್ತ ಸಾಲಿನಲ್ಲಿ 12,273 ಮಂದಿ ನೋಂದಾಯಿಸಿಕೊಂಡಿದ್ದು, ನಿರೀಕ್ಷಿತ ಗುರಿ ಸಾಧನೆಯಲ್ಲಿ ಹಿನ್ನಡೆಯಾದಂತಾಗಿದೆ. ಬೆಳೆ ವಿಮೆ ಮಹತ್ವದ ಬಗ್ಗೆ ಪ್ರಚಾರದ ಕೊರತೆ, ರೈತರ ಕಂತಿನ ಶುಲ್ಕ ಹೆಚ್ಚಳ, ಸಕಾಲದಲ್ಲಿ ವಿಮೆ ಪಾವತಿಯಾಗದಿರುವುದು, ವಿಮೆ ಬಗೆಗಿನ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ನಿಯಮಗಳಿಂದ ಹೆಸರು ನೋಂದಣಿಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ ಸಾಧನೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಜಿಲ್ಲೆಯ ಆರು ತಾಲೂಕು ಪೈಕಿ ಚಿಕ್ಕಬಳ್ಳಾಪುರ ಮತ್ತು ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಕಡಿಮೆ ಸಾಧನೆಯಾಗಿದ್ದು, ಚಿಕ್ಕ ತಾಲೂಕು ಗುಂಡಿಬಂಡೆಗೆ ಹೋಲಿಸಿದರೂ ತೀರಾ ಕಡಿಮೆಯಾಗಿದೆ. ಗೌರಿಬಿದನೂರಿನಲ್ಲಿ ಕೊಂಚ ಸಮಾಧಾನಕರ ಸಾಧನೆ ಕಂಡುಬಂದಿದೆಯಾದರೂ ಕಳೆದ ವರ್ಷಕ್ಕೆ ತಾಳೆ ಹಾಕಿದರೆ ಇಲ್ಲಿಯೂ ಹಿನ್ನಡೆಯಾಗಿದೆ.

ಬೆಳೆವಿಮೆ ಕಟ್ಟಿಸಿಕೊಳ್ಳುವಲ್ಲಿ ತೋರುವ ಕಾಳಜಿಯನ್ನು ಪರಿಹಾರ ನೀಡುವಲ್ಲಿ ಆಡಳಿತ, ಖಾಸಗಿ ಕಂಪನಿಗಳು, ಬ್ಯಾಂಕ್‌ಗಳು ತೋರುತ್ತಿಲ್ಲ ಹಾಗೂ ನಿಯಮಗಳು ಅವೈಜ್ಞಾನಿಕವಾಗಿವೆ ಎನ್ನುವ ಆರೋಪ ರೈತ ವಲಯದಲ್ಲಿ ಕೇಳಿಬರುತ್ತಿದ್ದು ಕಳೆದ ಸಾಲಿನಲ್ಲಿ ವಿಮೆ ತುಂಬಿದ್ದ ಹಲವರಿಗೆ ಈವರೆಗೂ ಪರಿಹಾರ ಕೈ ಸೇರದಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.

ಖಾಸಗಿ ವ್ಯಕ್ತಿಗಳ ನೇಮಕ: ಬೆಳೆ ಸೇರಿ ದಾಖಲೆಗಳನ್ನು ಸರಿಯಾಗಿ ಸಲ್ಲಿಕೆಯಾಗುತ್ತಿಲ್ಲ, ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ರೈತರೇ ವಿಮೆಗೆ ನೋಂದಣಿ ಮಾಡಿಕೊಳ್ಳಲು ವಿಶೇಷ ಆ್ಯಪ್ ಅಭಿವೃದ್ಧಿಪಡಿಸಿತ್ತು. ಅದರಂತೆ ಕಳೆದ ವರ್ಷ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಬಾರಿ ಹಿನ್ನಡೆಯಾಗಿದ್ದು ಕೆಲವೆಡೆ ತಾಲೂಕು ಆಡಳಿತಗಳು ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿ ಬೆಳೆ ಸರ್ವೇ ಮಾಡುತ್ತಿದೆ.

ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 12,273 ಮಂದಿ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆಗೆ 970 ಮಂದಿಗೆ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್.ರೂಪಾ, ಕೃಷಿ ಜಂಟಿ ನಿರ್ದೇಶಕಿ ಬೆಳೆವಿಮೆ ಯೋಜನೆಯಡಿ ಕಂತು ಕಟ್ಟಿಸಿಕೊಳ್ಳುವುದಕ್ಕೆ ನೀಡುವ ಕಾಳಜಿ ವಿಮೆ ಪಾವತಿಯಲ್ಲಿ ಕಂಡು ಬರುವುದಿಲ್ಲ. ಹಲವು ನಿಯಮಗಳ ಹೆಸರಿನಲ್ಲಿ ಸತಾಯಿಸಲಾಗುತ್ತದೆ. ಇದಕ್ಕೆ ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿಲ್ಲ. ಶ್ರೀನಿವಾಸ್, ರೈತ, ಚಿಕ್ಕಬಳ್ಳಾಪುರ ಬೆಳೆ ವಿಮೆಯಲ್ಲಿ ಖಾಸಗಿ ಕಂಪನಿಗಳಿಗೆ ಹೆಚ್ಚು ಅನುಕೂಲಕರವಾದ ಅವೈಜ್ಞಾನಿಕ ನಿಯಮಗಳನ್ನು ತೆಗೆಯಬೇಕು. ಅರ್ಹರಿಗೆ ಸರಳ ರೀತಿಯಲ್ಲಿ ವಿಮೆ ಹಣ ಸಿಗುವಂತಾಗಬೇಕು. ರಾಮಚಂದ್ರಪ್ಪ, ರೈತಪರ ಹೋರಾಟಗಾರ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net