

ಬೆಂಗಳೂರು: ಈ ಬಾರಿ ಮುಂಗಾರು ಆಶಾದಾಯಕವಾಗಿತ್ತು. ಮಳೆಯೂ ಕಾಲಕಾಲಕ್ಕೆ ಎಷ್ಟು ಬೇಕೋ ಅಷ್ಟೇ ಸುರಿದು ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ಕೋವಿಡ್ ಸಂಕಷ್ಟದಿಂದ ಪಾರಾಗಲು ಹಳ್ಳಿ ಸೇರಿದ್ದ ಜನ ಕೃಷಿಯಲ್ಲಿ ಖುಷಿ ಕಾಣುವ ಹಂಬಲದಲ್ಲಿದ್ದರು. ಇದೇ ಕಾರಣಕ್ಕೆ ಸರ್ಕಾರ ಅಂದಾಜು ಮಾಡಿದ್ದಕ್ಕಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಫಸಲು ಉತ್ತಮವಾಗಿತ್ತು. ಇನೇನು ಬೆಳೆ ಕೊಯ್ದು ಮನೆಗೆ ಒಯ್ಯಬೇಕು ಎನ್ನುವಷ್ಟರಲ್ಲಿ ಒಕ್ಕರಿಸಿದ ಸೈಕ್ಲೋನ್ ಎಲ್ಲವನ್ನೂ ನೀರು ಪಾಲು ಮಾಡಿದೆ. ಅದರಲ್ಲೂ ಭತ್ತ ಹಾಗೂ ರಾಗಿ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು, ರೈತ ಸಮುದಾಯ ಮೂಕಪ್ರೇಕ್ಷಕವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಾಫಿ, ಅಡಿಕೆಯಂಥ ತೋಟಗಾರಿಕೆ ಬೆಳೆಗಳೂ ನೆಲಕಚ್ಚಿವೆ.
ನಾಳೆಯಿಂದ ಕ್ಷೀಣ?: ರಾಜ್ಯದ ವಿವಿಧೆಡೆ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ನ.22ರಿಂದ ಕ್ಷೀಣಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾಮರಾಜನಗರ: ಕೆರೆಕಟ್ಟೆ, ಜಲಾಶಯ ಭರ್ತಿಯಾದರೆ ಬಾಗಿನ ಅರ್ಪಿಸುವುದು ಪದ್ಧತಿ. ಆದರೆ, ಗಡಿ ಮತ್ತು ಕಾಡಂಚಿನ ಈ ಗ್ರಾಮದ ಅಣೆಕಟ್ಟೆ ತುಂಬಿರುವುದಕ್ಕೆ ಪ್ರಾಣಿ ಬಲಿ ಕೊಟ್ಟು ಪೂಜೆ ಸಲ್ಲಿಸಲಾಗಿದೆ. ಹನೂರು ತಾಲೂಕಿನ ಮಲೆಮಹದೇಶ್ವರಬೆಟ್ಟ ಸಮೀಪದ ಗೋಪಿನಾಥಂ ಅಣೆಕಟ್ಟೆಗೆ ಸತತ ಮಳೆಯಿಂದ ಜೀವಕಳೆ ಬಂದಿರುವುದಕ್ಕೆ ಗ್ರಾಮಸ್ಥರು ಕುರಿ ಬಲಿ ಕೊಟ್ಟು ರಕ್ತವನ್ನು ನೀರಿನಲ್ಲಿ ಬಿಟ್ಟು ಪೂಜೆ ಸಲ್ಲಿಸಿದ್ದಾರೆ. ಬುಧವಾರ ಈ ಧಾರ್ವಿುಕ ಕಾರ್ಯ ನಡೆಸಿ ಊರಿನ ಜನ ಮಾಂಸದೂಟ ಮಾಡಿ ಹಬ್ಬ ಮಾಡಿದ್ದಾರೆ.
ಸರ್ಕಾರವು ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನನ್ನು ಮರೆಯಬಾರದು. ಕೋವಿಡ್ ಮಹಾಮಾರಿ ಯಿಂದ ತತ್ತರಿಸಿದ್ದ ಜನ ಈಗ ಮಳೆಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಅವರು ಬದುಕು ಕಟ್ಟಿಕೊಳ್ಳುವ ಮುನ್ನವೇ ಮಳೆ ಸಂಕಷ್ಟಕ್ಕೀಡು ಮಾಡಿದೆ. ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ. ರಾಜ್ಯ ಸರಕಾರ ಮಾಡಿರುವುದೇನು? ಸಚಿವರು ಎಲ್ಲಿದ್ದಾರೆ? ಅಧಿಕಾರಿಗಳೇನು ಮಾಡುತ್ತಿದ್ದಾರೆ? ಸರಕಾರ ಸಭೆಗಳಿಗೆ ಸೀಮಿತವಾದರೆ ಪ್ರಯೋಜನ ಶೂನ್ಯ. ಅಧಿಕಾರಿಗಳು ಹಳ್ಳಿಗಳತ್ತ ನಡೆಯಲಿ .| ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕಳೆದ 2 ದಿನದಲ್ಲಿ ಮಳೆಸಂಬಂಧಿ ಅವಘಡಗಳಲ್ಲಿ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾಜ್ಯದಲ್ಲಿ 9 ಮಂದಿ ಮೃತಪಟ್ಟಿದ್ದರು. ಶನಿವಾರ ಸಹ 9 ಮಂದಿ ಸಾವನ್ನಪ್ಪಿದ್ದಾರೆ. ಅತ್ತ ಆಂಧ್ರಪ್ರದೇಶದಲ್ಲೂ ಮಳೆ, ನೆರೆ ಆರ್ಭಟಕ್ಕೆ ಜನರು ತತ್ತರಿಸಿದ್ದು, ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ರೈತರು ಮಳೆ ನೀರಲ್ಲಿ ಕೊಚ್ಚಿಹೋಗಿದ್ದಾರೆ. ಸಿದ್ದರಹಳ್ಳಿಯ ಪೊನ್ನುಸ್ವಾಮಿ (53) ಮತ್ತು ಅಜ್ಜಂಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ನಿವಾಸಿ ಆನಂದ್(40) ಮೃತರು. ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ಶುಕ್ರವಾರ ರಾತ್ರಿ ಹರಿಹರ ತಾಲೂಕು ಗೋವಿನಹಾಳು ಗ್ರಾಮದ ಕುರಿದಡ್ಡಿಯಲ್ಲಿದ್ದ ಚಪ್ಪರ ಕುಸಿದು ಬಸವರಾಜಪ್ಪ (62) ಮೃತಪಟ್ಟಿದ್ದು 2 ಕುರಿಗಳು ಅಸುನೀಗಿವೆ. ಚನ್ನಗಿರಿ ತಾಲೂಕು ನಲ್ಲೂರು ಸೇತುವೆ ಬಳಿ ಎರವನಾಗತಿಹಳ್ಳಿಯ ಕೆಂಚಪ್ಪ (70) ಎಂಬುವವರು ಶನಿವಾರ ರಸ್ತೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ದಾವಣಗೆರೆ ತಾಲೂಕು ಹುಚ್ಚವ್ವನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲುಹೋಗಿದ್ದ ತಿಪ್ಪೇಸ್ವಾಮಿ ಎಂಬುವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮಳೆಗೆ ಫಸಲು ನಷ್ಟವಾಗಿದ್ದರಿಂದ ಮನನೊಂದು ಶಿರಸಿ ತಾಲೂಕಿನ ನರೂರಿನ ರೈತ ಗಂಗಾಧರ ಶೇಷಣ್ಣನವರ (58) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರ ದೊಡ್ಡಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಹಾನಗಲ್ಲ ತಾಲೂಕು ಕಾಮನಹಳ್ಳಿ ನಿವಾಸಿ ಹೆಗ್ಗಪ್ಪ ನಿಂಗಪ್ಪ ಜಾನಗುಂಡಿ(37) ಮುಳುಗಿ ಮೃತಪಟ್ಟಿದ್ದಾರೆ. ರಟ್ಟಿಹಳ್ಳಿ ತಾಲೂಕು ಬೆಟಕೇರೂರನಲ್ಲಿ ವಿದ್ಯುತ್ ಸ್ಪರ್ಶದಿಂದ ಮಕರಿ ಗ್ರಾಮದ ರೈತ ಶಿವು ರಾಮಪ್ಪ ಇಂಗಳಗೊಂದಿ(38) ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆಯ ವಡೇರಹಳ್ಳಿಯಲ್ಲಿ ಮುಳುಗುತ್ತಿದ್ದ ಮೋಟಾರನ್ನು ಮೇಲೆತ್ತುವ ಪ್ರಯತ್ನದಲ್ಲಿದ್ದಾಗ ಕಾಲುಜಾರಿ ಬಿದ್ದು ರಾಮಮೂರ್ತಿ (55)ಎಂಬುವವರು ಮೃತಪಟ್ಟಿದ್ದಾರೆ.