

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹಿಂಗಾರು ಆರ್ಭಟದಿಂದ ಸಂತಸಗೊಂಡು ಬಿತ್ತನೆಗೆ ಸಜ್ಜಾಗಿದ್ದ ರಾಜ್ಯದ ರೈತರಿಗೆ ಬಿತ್ತನೆ ಬೀಜದ ದರ ಏರಿಕೆ ಆಘಾತ ತಂದೊಡ್ಡಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬಿತ್ತನೆ ಬೀಜಗಳ ದರ ಶೇ. 10ರಿಂದ 20ರಷ್ಟು ಹೆಚ್ಚಳವಾಗಿರುವುದು ರೈತಾಪಿ ಸಮುದಾಯವನ್ನು ಸಂಕಷ್ಟಕ್ಕೆ ದೂಡಿದೆ.
ರಾಜ್ಯದಲ್ಲಿ ಕೃಷಿ ಇಲಾಖೆ ಕಬ್ಬು ಬೆಳೆ ಸೇರಿ ಅಂದಾಜು 22.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹಾಕಿಕೊಂಡಿದೆ. ಇದಕ್ಕಾಗಿ 1.75 ಲಕ್ಷ ಟನ್ ಬಿತ್ತನೆ ಬೀಜವನ್ನು ಸಂಗ್ರಹಿಸಿಕೊಂಡಿದೆ. ಆದರೆ, ಬಿತ್ತನೆ ಬೀಜ ದರ ಹೆಚ್ಚಳ ರೈತರನ್ನು ಚಿಂತೆಗೀಡು ಮಾಡಿದೆ. ಸರ್ಕಾರದ ಸಬ್ಸಿಡಿ ದರಕ್ಕಿಂತ ಖಾಸಗಿ ಕಂಪನಿಗಳ ಬಿತ್ತನೆ ಬೀಜಗಳ ದರ ದುಪ್ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಕಡಲೆ ಕೆಜಿಗೆ 75 ರಿಂದ 85 ರೂ.ವರೆಗೆ, ಗೋಧಿ 50 ರಿಂದ 66 ರೂ. ಹಾಗೂ ಜೋಳ 85 ರೂ.ವರೆಗೆ ಮಾರಾಟವಾಗಿತ್ತು. ಈ ವರ್ಷ ಬಿತ್ತನೆ ಬೀಜಗಳ ದರದಲ್ಲಿ ಏರಿಕೆ ಕಂಡಿದ್ದು, ಎಲ್ಲ ಬಿತ್ತನೆ ಬೀಜಗಳ ಕೆಜಿಗೆ 15ರಿಂದ 20 ರೂ. ಹೆಚ್ಚಳವಾಗಿದೆ.
ಪೂರೈಕೆಯೇ ಇಲ್ಲ: ಸರ್ಕಾರ ಪ್ರತಿ ಕೆ.ಜಿ ಕಡಲೆ ಬೀಜಕ್ಕೆ 25 ರೂ. ಸಹಾಯಧನ ನೀಡುತ್ತಿದೆ. ಅಂದರೆ ಪ್ರತಿ 20 ಕೆ.ಜಿ. ಪ್ಯಾಕೆಟ್ಗೆ 1,200 ರೂ. ನಿಗದಿ ಮಾಡಿ ರೈತಸಂಪರ್ಕ ಕೇಂದ್ರಗಳ ಮೂಲಕ ವಿತರಿಸುತ್ತಿದೆ. ಈ ವರ್ಷ 150 ರೂ. ವರೆಗೆ ಹೆಚ್ಚಳವಾಗಿದೆ. ಮಳೆಯಾಗಿ ಬಿತ್ತುವ ಅವಕಾಶ ಇದ್ದರೂ ರೈತರಿಗೆ ಅದು ಸಾಧ್ಯ ಆಗುತ್ತಿಲ್ಲ. ಮತ್ತೊಂದೆಡೆ, ದೇಸಿ ಬೀಜಗಳ ಕೊರತೆಯಿಂದಾಗಿ ಖಾಸಗಿ ಕಂಪನಿಗಳ ಬೀಜದ ಹಾವಳಿ ಹೆಚ್ಚಾಗಿದೆ. ಅಲ್ಲದೆ, ಕೆಲವೆಡೆ ಬಿತ್ತನೆಗೆ ಬೇಡಿಕೆಗೆ ತಕ್ಕಂತೆ ಬೀಜ ಪೂರೈಕೆಯಾಗದಿರುವುದು ಕೂಡ ದರ ಹೆಚ್ಚಳಕ್ಕೆ ಕಾರಣ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಸಿ ಬೀಜದ ಸುಳಿವಿಲ್ಲ: ನಗರ ಮತ್ತು ಗ್ರಾಮೀಣ ಪ್ರದೇಶ ಮಾರುಕಟ್ಟೆ ಪ್ರದೇಶಗಳಲ್ಲಿ ಜೋಳ, ಕಡಲೆ, ಗೋಧಿ, ಸೂರ್ಯ ಕಾಂತಿ ಬಿತ್ತನೆ ಜೀಜ ಸಾಕಷ್ಟು ಪ್ರಮಾಣದಲ್ಲಿವೆ. ಆದರೆ, ಪ್ರಮಾಣೀಕೃತ ಬೀಜ ಸಿಗುತ್ತಿಲ್ಲ. ಅಷ್ಟೆ ಅಲ್ಲದೆ, ರೈತರ ಮನೆಯಲ್ಲಿ ಮಾತ್ರ ಸಿಗುವ ದೇಸಿ ಬೀಜಗಳು ಕೊರತೆ ಅಧಿಕ ಪ್ರಮಾಣದಲ್ಲಿದೆ. ಕೆಜಿಗೆ 150 ರೂ. ಕೊಟ್ಟರೂ ದೇಸಿ ಬೀಜಗಳು ಸಿಗುತ್ತಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಕಡಲೆ ಬೀಜದ ದರ 8 ರಿಂದ 9ಸಾವಿರ ರೂ. ಮುಟ್ಟಿದೆ. ಹೀಗಾಗಿ ಅಷ್ಟು ದುಬಾರಿ ಬೀಜವನ್ನು ಖರೀದಿಸಿ ಆರ್ಎಸ್ಕೆಗಳಿಗೆ ಕಡಿಮೆ ದರದಲ್ಲಿ ಪ್ರಮಾಣೀಕರಿಸಿ ವಿತರಿಸಲು ಬೀಜ ನಿಗಮಕ್ಕೆ ಸಾಧ್ಯ ಆಗುತ್ತಿಲ್ಲ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರ ಸಬ್ಸಿಡಿ ಬೀಜದಲ್ಲಿ ಪ್ರತಿ ಕೆಜಿಗೆ ಬಿತ್ತನೆಯ ಬೀಜದ ದರದ 15 ರಿಂದ 25 ರೂ. ವರೆಗೆ ಹೆಚ್ಚಳವಾಗಿದೆ.
ಎಲ್ಲೆಲ್ಲಿ ಬೆಲೆ ಏರಿಕೆ?: ಈ ವರ್ಷ ಹಿಂಗಾರಿನಲ್ಲಿ ಜೋಳ, ಕಡಲೆ ಹಾಗೂ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಬಂದಿದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಕಡಲೆ, ಬೆಳಗಾವಿ, ವಿಜಯಪುರ, ಕೊಪ್ಪಳ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಜೋಳದ ಬೀಜದ ದರದಲ್ಲಿ ಏರಿಕೆ ಕಂಡಿದೆ. ತುಮಕೂರು, ದಾವಣಗೆರೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆಯ ಏರುಪೇರಿನಿಂದಾಗಿ ಬಿತ್ತನೆಗೆ ಹಿನ್ನಡೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿ 5,10,15,20 ಕೆಜಿ ತೂಕದ ಬೀಜದ ಪ್ಯಾಕೆಟ್ ಬೆಲೆ 110ರಿಂದ 350 ರೂ. ವರೆಗೆ ಹೆಚ್ಚಳವಾಗಿದೆ.
ಹಿಂಗಾರು ಬಿತ್ತನೆ ಬೇಕಾಗುವ ಬೀಜ, ರಸಗೊಬ್ಬರಗಳ ಯಾವುದೇ ಕೊರತೆ ಇರುವುದಿಲ್ಲ. ಸರ್ಕಾರದ ಸಬ್ಸಿಡಿ ದರದಲ್ಲಿ ನೀಡುವ ಬೀಜಗಳ ದರ ಹೆಚ್ಚಳವಾಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಪರಿಶೀಲನೆ ನಡೆಸಲಾಗುವುದು.
| ಮೊಹಮ್ಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿ