

ತಿ.ನರಸೀಪುರ : ಕೃಷಿ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎಂದು ಸಹಾಯಕ ನಿರ್ದೇಶಕ ಮಹದೇವ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ತಾಲೂಕಿನ ಮಡವಾಡಿ ಗ್ರಾಮದಲ್ಲಿ ಮಂಗಳವಾರ ರೈತಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಇಲಾಖೆಯಲ್ಲಿ ದೊರಕುವ ಸೌಲಭ್ಯಗಳಾದ ಅಡುಗೆ ಎಣ್ಣೆ ತೆಗೆಯುವ ಯಂತ್ರ, ಟಾರ್ಪಾಲ್, ಸ್ಪ್ರಿಂಕ್ಲರ್, ಬೀಜ, ಗೊಬ್ಬರ ಮತ್ತು ಔಷಧಗಳನ್ನು ಅಗತ್ಯ ದಾಖಲೆಗಳನ್ನು ನೀಡಿ ಪಡೆದುಕೊಂಡು ಉತ್ತಮ ಇಳುವರಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಹನುಮಂತಪ್ಪ ಮಾತನಾಡಿ, ನಾಲ್ಕು ದಶಕಗಳಿಂದ ಸಂಸ್ಥೆ ಗ್ರಾಮೀಣ ಭಾಗಕ್ಕೆ ಬೇಕಾದ ವಿವಿಧ ಸವಲತ್ತು ನೀಡುತ್ತಿದೆ. ಕೃಷಿ ರಂಗದ ಪ್ರಗತಿಯಾದರೆ ದೇಶ ಪ್ರಗತಿ ಆಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರವಿ, ವಲಯ ಮೇಲ್ವಿಚಾರಕಿ ಲಕ್ಷ್ಮೀ, ಕೃಷಿ ಮೇಲ್ವಿಚಾರಕ ಕುಮಾರ್, ಸೇವಾ ಪ್ರತಿನಿಧಿ ಸೌಮ್ಯಾ, ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.