

ನವದೆಹಲಿ: ಕಳೆದ ಎರಡು ತಿಂಗಳಿನಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಗಣರಾಜ್ಯೋತ್ಸವ ದಿನದಂದು ಬೃಹತ್ ರ್ಯಾಲಿ ನಡೆಸಲು ರೈತರು ಸಿದ್ಧವಾಗಿದ್ದಾರೆ. ಆದರೆ ಆ ದಿನದಂದು ಗ್ಯಾಂಗ್ ಒಂದು ರೈತರ ಮೇಲೆ ದಾಳಿ ನಡೆಸಿ, ನಾಲ್ವರನ್ನು ಗುಂಡಿಕ್ಕಿ ಕೊಲ್ಲಲು ಯೋಜನೆ ಹಾಕಿಕೊಂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ. ಸುಪಾರಿ ಪಡೆದಿರುವ ಗ್ಯಾಂಗ್ ಅವನು ಎಂದು ಒಬ್ಬ ಮುಖ ಮುಚ್ಚಿಕೊಂಡಿರುವ ವ್ಯಕ್ತಿಯನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಿದ್ದಾರೆ. ಆದರೆ ಈ ಆರೋಪದಲ್ಲಿ ಇದೀಗ ಬಿಗ್ ಟ್ವಿಸ್ಟ್ ಎದುರಾಗಿದೆ. ಸಂಬಂಧಿಕರನ್ನು ನೋಡಲು ಬಂದ ನನ್ನನ್ನು ಥಳಿಸಿ, ಸುಳ್ಳು ಕಥೆ ಹೇಳಿಸಿದ್ದಾರೆ ಎಂದು ಆ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.
ದೆಹಲಿಯಲ್ಲಿರುವ ನನ್ನ ಸಂಬಂಧಿಗೆ ಮಗುವಾಗಿತ್ತು. ಮಗುವನ್ನು ನೋಡಲೆಂದು ನಾನು ಸೋನಿಪತ್ನಿಂದ ದೆಹಲಿಗೆ ಬಂದೆ. ಬಸ್ಸಿಳಿದು ಬರುತ್ತಿದ್ದಾಗ ಯಾರೋ ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದರು. ಅದೇ ಆರೋಪದಲ್ಲಿ ನನ್ನನ್ನೂ ಎಳೆದೊಯ್ದ ಕೆಲವರು ಯಾವುದೋ ಒಂದು ಕ್ಯಾಪ್ನಲ್ಲಿ ನನ್ನ ಬಟ್ಟೆ ಬಿಚ್ಚಿ ಹೊಡೆದರು. ನೀನು ಅದಾದ ಮೇಲೆ ಉಲ್ಟಾ ನೇತಾಡಿಸಿ ಬೆಲ್ಟ್ನಲ್ಲಿ ಹೊಡೆದರು. ಮಾರನೇ ದಿನ ನಾವು ಹೇಳಿದಂತೆ ಹೇಳು ಎಂದು ಹೇಳಿದರು. ಊಟ ಕೊಟ್ಟು, ನಂತರ ವಿಡಿಯೋ ಮಾಡಿಸಿದರು. ನನ್ನ ಜತೆ ಸಾಗರ್ ಹೆಸರಿನ ಯುವಕನನ್ನೂ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಸಾಗರ್ ಹಿಂದಿನ ದಿನವೇ ಅಲ್ಲಿಂದ ಓಡಿ ಹೋಗಿದ್ದ. ಮಾರನೇ ದಿನ ಬೆಳಗ್ಗೆ ಅವರು ಸಾಗರ್ನನ್ನು ಕೊಲೆ ಮಾಡಿದ್ದಾಗಿ ಹೇಳಿದರು. ನೀನು ನಾವು ಹೇಳಿದಂತೆ ಕೇಳದಿದ್ದರೆ ನಿನ್ನನ್ನೂ ಕೊಲೆ ಮಾಡುತ್ತೇವೆ ಎಂದರು.
ಅದಾದ ಮೇಲೆ ನನ್ನನ್ನು ಪ್ರೆಸ್ ಮೀಟ್ನಲ್ಲಿ ಕೂರಿಸಲಾಯಿತು. 10 ಜನರ ಗ್ಯಾಂಗ್ ಎಂದು ಹೇಳು, ಕೊಲೆ ಮಾಡಲು ಸಂಚು ಹಾಕಿದ್ದೆವೆಂದು ಹೇಳು ಎಂದು ಕಥೆ ಹೇಳಲಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಒತ್ತಾಯ ಪೂರ್ವಕವಾಗಿ ನನ್ನಿಂದ ಸುಳ್ಳು ಕಥೆ ಹೇಳಿಸಲಾಯಿತು ಎಂದು ಆತ ತಿಳಿಸಿದ್ದಾನೆ. ಹರಿಯಾಣ ಪೊಲೀಸರ ವಶದಲ್ಲಿರುವ ಯುವಕ ಪೊಲೀಸರ ಮುಂದೆ ಈ ಎಲ್ಲ ವಿಚಾರಗಳನ್ನು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)