ಕಿಕ್ಕೇರಿ: ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಸಾಲಭಾದೆಯಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ಗ್ರಾಮದ ರೈತ ನಂಜಪ್ಪ(47). ನಂಜಪ್ಪ ಹಾಗೂ ಇವರ ತಂದೆ ಬೋರೇಗೌಡ ಇವರಿಬ್ಬರ ಹೆಸರಿನಲ್ಲಿ ಜಂಟಿಖಾತೆಯಲ್ಲಿ 1.5 ಲಕ್ಷ ರೂ. ಸಾಲ, ಇವರ ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿ ಕಿಕ್ಕೇರಿ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 2 ಲಕ್ಷ ರೂ., ಹೆಂಡತಿ ಧನಲಕ್ಷ್ಮೀ ಹೆಸರಿನಲ್ಲಿ ಕಿಕ್ಕೇರಿ ಡಿಸಿಸಿ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡಮಾನ ಇಟ್ಟು 1.5ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇದಲ್ಲದೇ ಖಾಸಗಿಯಾಗಿಯೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
2 ಎಕರೆ ಕೃಷಿ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆದಿದ್ದರು. ಕಬ್ಬು ಕೂಳೆ ಕಬ್ಬಾಗಿದ್ದು ಇನ್ನು ಕಟಾವು ಆಗಿರಲಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಸಾಲ ತೀರಿಸಲು ಚಡಪಡಿಸುತ್ತಿದ್ದರು. ಇದೇ ಚಿಂತೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಈ ಮಧ್ಯೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮಂಗಳವಾರ ಸಂಜೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ರಕ್ಷದ ಮಡುವಿನಲ್ಲಿ ಬಿದ್ದಿದ್ದ ನಂಜಪ್ಪ ಅವರನ್ನು ಕಂಡ ಕುಟುಂಬದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಓಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಕಿಕ್ಕೇರಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.