ಅಧಿಕಾರಿಗಳ ವಿರುದ್ಧ ಡೆತ್​ನೋಟ್ ಬರೆದಿಟ್ಟು ಮೊಬೈಲ್ ಟವರ್ ಏರಿದ ರೈತ

Farmer attempted suicide
Published on

ಮಂಡ್ಯ: ಕೊಪ್ಪ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸೇರಿದಂತೆ ಹಲವರ ವಿರುದ್ಧ ಡೆತ್​ನೋಟ್​ ಬರೆದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮೊಬೈಲ್ ಟವರ್ ಏರಿದ್ದ ಪ್ರಹಸನ ಇಂದು ಬೆಳಗ್ಗೆ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಬಿದರಮೆಳೆ ಗ್ರಾಮದ ರೈತ ಮೋಹನ್ ಆತ್ಮಹತ್ಯೆಗೆ ಯತ್ನಿಸಿದವ. 'ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದಲ್ಲಿ ತನ್ನನ್ನು ಸಾಲಮನ್ನಾ ಯೋಜನೆಯಿಂದ ಹೊರಗಿಟ್ಟಿದ್ದಾರೆ. ಸಾಲಮನ್ನಾ ಮಾಡದೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ ಮೋಹನ್, ಸಾಲಮನ್ನಾ ಮಾಡಿಸಿಕೊಡಿ, ಇಲ್ಲವಾದರೆ ಸಾಯುವೆ' ಎಂದು ಟವರ್​ ಮೇಲೆ ಕುಳಿತಿದ್ದ.

'ಸಾಲಮನ್ನಾಕ್ಕಾಗಿ ಕಾನೂನು ಹೋರಾಟ ಮಾಡಿದರೂ ನನಗೆ ನ್ಯಾಯ ಸಿಕ್ಕಿಲ್ಲ. ನನ್ನ ಸಾವಿಗೆ ಬೆಕ್ಕಳಲೆ ಗ್ರಾಮದ ಪ್ರಾಥಮಿಕ ಸಹಕಾರ ಸಂಘದ ಇಒ, ಆಡಳಿತ ಮಂಡಳಿ, ಕೊಪ್ಪ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹಾಗೂ ಡಿಆರ್ ಕಾರಣ' ಎಂದು ಪತ್ರ ಬರೆದಿಟ್ಟ ಮೋಹನ್, ಟವರ್ ಮೇಲೇರಿ ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದರು.

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ರೈತನ ಮನವೊಲಿಕೆಗೆ ಯತ್ನಿಸಿದರೂ ಆರಂಭದಲ್ಲಿ ಫಲಿಸಲಿಲ್ಲ. ಕ್ಷಣಾರ್ಧದಲ್ಲೇ ಜನಜಂಗುಳಿ ಸೇರಿತು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಸಮಯದ ಬಳಿಕ ರೈತನ‌ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಸುರಕ್ಷಿತವಾಗಿ ರೈನನ್ನು ಕೆಳಗಿಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net