

ಹಾವೇರಿ: ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ಇದನ್ನು ಅವರಿಗೆ ಜ್ಞಾಪಕ ಮಾಡುವ ನಿಟ್ಟಿನಲ್ಲಿ ಮತ್ತು ವಿದ್ಯುತ್ ಇಲಾಖೆಯ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯಾದ್ಯಂತ ಸೆ. 4ರಂದು ಆಯಾ ಜಿಲ್ಲಾ ವಿದ್ಯುತ್ ಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ ಅವರು, ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಗೊಳಿಸಿದಾಗ ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪ ಅದನ್ನು ಅನುಷ್ಠಾನಕ್ಕೆ ತಂದರು. ಆಗ ಇದೇ ಸಿದ್ದರಾಮಯ್ಯ ಅದನ್ನು ನಮ್ಮ ಸರ್ಕಾರ ಬಂದ 24ಗಂಟೆಯಲ್ಲಿ ರದ್ದುಗೊಳಿಸುವ ಭರವಸೆ ನೀಡಿದ್ದರು. ಆದರೆ, ಅದು ಇಂದಿಗೂ ಈಡೇರಿಲ್ಲ. ಪ್ರಸ್ತುತ 10 ಲಕ್ಷ ರೈತರು ಕೃಷಿಯಿಂದ ವಂಚಿತರಾಗಿದ್ದಾರೆ. 1974 ರಲ್ಲಿ ದೇವರಾಜ ಅರಸು ಜಾರಿಗೆ ತಂದ ಕಾಯ್ದೆಯ ಬಲವನ್ನೇ ಕುಗ್ಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮಾತಿನಲ್ಲಿ ಎಲ್ಲರನ್ನೂ ವಂಚಿಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ ನಿಗದಿ ಇಂದಿಗೂ ಕಾನೂನಾತ್ಮಕ ಕಾಯ್ದೆ ಆಗಿಲ್ಲ. ಕೇಂದ್ರದ ಮತ್ತು ರಾಜ್ಯ ಸರ್ಕಾರಕ್ಕೆ ಈ ಕುರಿತು ಇಚ್ಛಾಶಕ್ತಿ ಇಲ್ಲವಾಗಿದೆ. ಈ ಹಿಂದೆ ಜಿಂದಾಲ್ಗೆ ಭೂಮಿ ನೀಡಿದ್ದ ಯಡಿಯೂರಪ್ಪ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಇದೇ ಸಿದ್ದರಾಮಯ್ಯ ಬೊಬ್ಬೆ ಹೊಡೆದರು. ಈಗ ಅದೇ ಸಿದ್ದರಾಮಯ್ಯನ ಕಿಕ್ಬ್ಯಾಕ್ ಎಷ್ಟು ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದ ಅವರು, ಜನರ ಪ್ರತಿ ಪೈಸೆ, ರಕ್ತದ ಶ್ರಮದ ಈ ಹಣವನ್ನು ನಿಮ್ಮ ಹಾಗೆ ಬಂದವರೆಲ್ಲ ಲೂಟಿ ಹೊಡೆದರೆ ಹೇಗೆ ಎಂದು ಪ್ರಶ್ನಿಸಿದರು.
ರೈತ ಮುಖಂಡರಾದ ಭೈರೇಗೌಡ, ಹನುಮಂತಪ್ಪ, ಬಸವರಾಜ, ರಮೇಶ ದೊಡ್ಡೂರ ಮತ್ತಿತರರು ಇದ್ದರು.