

ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಪುನೀತ್ ರಾಜ್ಕುಮಾರ್ ಸಮಾಧಿಯ ಬಳಿ ಅಭಿಮಾನಿಗಳ ದಂಡು ಹರಿದು ಬರುತ್ತಿದ್ದು, ಹೆಚ್ಚಿನ ಜನಸಂಖ್ಯೆಯಿಂದಾಗಿ ಕಂಠೀರವ ಸ್ಟುಡಿಯೋದ ಗೇಟನ್ನು ಮುಚ್ಚಲಾಗಿದೆ.
ಮಂಗಳವಾರ (ನ.1) ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಅಪ್ಪು ಸಮಾಧಿಯ ಮುಂದೆ ಆಚರಿಸಿಸುವ ಸಲುವಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಅಭಿಮಾನಿಗಳು ಬರುತ್ತಿದ್ದು, ಮಧ್ಯಾಹ್ನವಾದ್ರೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧ್ಯಾಹ್ನದ ಹೊತ್ತಿಗೆ ಸುಮಾರು 50 ಸಾವಿರಕ್ಕೂ ಅಧಿಕ ಅಭಿಮಾನಿಗಳ ಸಮಾಧಿಗೆ ಭೇಟಿ ನೀಡಿದ್ದಾರೆ. ಬಿಗಿ ಬಂದೋಬಸ್ತ್ನ ಕಾರಣದಿಂದ ಹಾಕಲಾದ ಬ್ಯಾರಿಕೇಡ್ಗಳ ಒಳಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿಕೊಂಡಿದ್ದಾರೆ.
ಅಭಿಮಾನಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಪೊಲೀಸರು ಕಂಠೀರವ ಸ್ಟುಡಿಯೋ ಮುಂಭಾಗದ ಗೇಟನ್ನು ಕ್ಲೋಸ್ ಮಾಡಿದ್ದಾರೆ. ಅಭಿಮಾನಿಗಳನ್ನು ಹಂತ ಹಂತವಾಗಿ ಒಳಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ. ಅಪ್ಪು ನಿಧನದ ದಿನದಿಂದ ಪ್ರತೀ ದಿನ ಸಮಾಧಿಯ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದು, ಒಂದು ರೀತಿಯಲ್ಲಿ ಅಪ್ಪು ಸಮಾಧಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.