

ಬೆಂಗಳೂರು: ಖ್ಯಾತ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುರತ್ಕಲ್ ಹಾಗೂ ಧರ್ಮಸ್ಥಳ ಮೇಳಗಳಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ಪ್ರಾಸಬದ್ಧ, ನಿರರ್ಗಳ ಅರ್ಥಗಾರಿಕೆಯಿಂದ ಮನೆ ಮಾತಾಗಿದ್ದರು. ಶಾಸಕರಾಗಿ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.
ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದ ಸುಂದರ್ ರಾವ್, ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿ 1994ರಿಂದ 1999ರವರೆಗೆ ಕಾರ್ಯ ನಿರ್ವಯಿಸಿದ್ದರು. ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆ ಅರವದ್ದು.
ಕುಂಬ್ಳೆ ಸುಂದರ್ ರಾವ್ರ ಅಂತ್ಯಕ್ರಿಯೆ ಗುರುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.