

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮುರಳಿ ಮೋಹನ್ ಅವರು ಇಂದು (ಆ.13) ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಜೆಸಿ ರೋಡ್ ಬಳಿಯಿರುವ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
ಮುರಳಿ ಮೋಹನ್ ಅವರಿಗೆ 57 ವರ್ಷ ವಯಸ್ಸಾಗಿತ್ತು, ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್ಗೆ ಸುದೀಪ್, ಉಪೇಂದ್ರ ಧನಸಹಾಯ ಮಾಡಿದ್ದರು. ಕಿಡ್ನಿ ಕಸಿಗೆ ಸಜ್ಜಾಗಿದ್ದ ಮುರುಳಿ ಮೋಹನ್, ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
ನಟ ಉಪೇಂದ್ರ ಅವರಿಗೆ ಮುರಳಿ ಮೋಹನ್ ಆಪ್ತರಾಗಿದ್ದರು. ಕಾಲೇಜು ದಿನಗಳಿಂದ ಅವರು ಉಪೇಂದ್ರ ಜೊತೆ ಸ್ನೇಹ ಹೊಂದಿದ್ದರು. ‘ಓಂ’, ‘ಶ್’, ‘ತರ್ಲೆ ನನ್ ಮಗ’ ಮುಂತಾದ ಸಿನಿಮಾಗಳಲ್ಲಿ ಅವರು ಉಪೇಂದ್ರ ಜೊತೆ ಕೆಲಸ ಮಾಡಿದ್ದರು. ಸತತ 36 ವರ್ಷಗಳು ಚಿತ್ರರಂಗದಲ್ಲಿ ಎಸ್ ಮುರಳಿ ಮೋಹನ್ ಸೇವೆ ಸಲ್ಲಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ತಮ್ಮ ನಿರ್ದೇಶನ, ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ದೂರವೇ ಉಳಿದಿದ್ದರು. ನಾಗರಹಾವು, ಸಂತ, ಮಲ್ಲಿಕಾರ್ಜುನ ಚಿತ್ರಗಳ ನಿರ್ದೇಶಕ ಎಸ್ ಮುರಳಿ ಮೋಹನ್ ಅವರು 'ರಾಜ್' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ನಟನೆ ಕೂಡ ಮಾಡಿದ್ದರು.