Bihar Election | ಲಾಲೂ ಪುತ್ರರ ನಡುವೆ ಯಾದವಿ ಕಲಹ

yadav Brothers
Published on

Bihar Election: ಬಿಹಾರದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತಿದ್ದಂತೆ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಮತ್ತೆ ರಾಜಕೀಯ ಮತ್ತು ವೈಯಕ್ತಿಕ ಉದ್ವಿಗ್ನತೆ ಉಂಟಾಗಿದ್ದು, ಲಾಲೂ ಹಿರಿಯ ಮಗ ತೇಜ್ ಪ್ರತಾಪ್ ಯಾದವ್, ತಮ್ಮ ಕಿರಿಯ ಸಹೋದರ ತೇಜಸ್ವಿ ಯಾದವ್ ಮತ್ತು ಅಕ್ಕ ಮಿಸಾ ಭಾರ್ತಿಯನ್ನು ಎಕ್ಸ್​​ನಲ್ಲಿ ಅನ್‌ಫಾಲೋ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಮುಖ ಚರ್ಚಾ ವಿಷಯವಾಗಿದೆ.

ನೇರ ನುಡಿಯೊಂದಿಗೆ, ತಮ್ಮ ಕೆಲ ವಿವಾದಗಳಿಂದ ತೇಜ್ ಪ್ರತಾಪ್ ರಾಜ್ಯದ ತುಂಬೆಲ್ಲಾ ಮನೆಮಾತಾಗಿದ್ದಾರೆ.

ತೇಜ್ ಪ್ರತಾಪ್ ಅವರ ಮುಂದಿನ ನಡೆ...

ಕೌಟುಂಬಿಕ ಭಿನ್ನಾಭಿಪ್ರಾಯದ ನಡುವೆಯೇ, ತೇಜ್ ಪ್ರತಾಪ್ ಯಾದವ್ ಅಕ್ಟೋಬರ್ 13 ರಂದು ತಮ್ಮ ಪಕ್ಷವಾದ ಜನಶಕ್ತಿ ಜನತಾದಳದ (ಜೆಜೆಡಿ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವು ತಮ್ಮ ರಾಜಕೀಯ ಪ್ರಯಾಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದರು. ತೇಜ್​ ಪ್ರತಾಪ್​ ಯಾದವ್ 2015 ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದ ಕ್ಷೇತ್ರವಾದ ಮಹುವಾದಿಂದ ಸ್ಪರ್ಧಿಸುವುದಾಗಿ ದೃಢಪಡಿಸಿದರು. ಪ್ರಸ್ತುತ ಇಲ್ಲಿ ಆರ್‌ಜೆಡಿಯ ಮುಖೇಶ್ ಕುಮಾರ್ ಹಾಲಿ ಶಾಸಕರಾಗಿದ್ದಾರೆ. ಇದು ಯಾದವರ ಭದ್ರಕೋಟೆಯಲ್ಲಿ ರಣಕಣಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ. ಸಂಭಾವ್ಯ ಮೈತ್ರಿಯ ಪ್ರಶ್ನೆಗೆ ಉತ್ತರಿಸಿದ ತೇಜ್ ಪ್ರತಾಪ್, ಎಲ್ಲರೂ ಭೇಟಿಯಾಗುತ್ತಿದ್ದು ಈ ವಿಷಯವಾಗಿ ತೆರೆ ಹಿಂದೆ ಚರ್ಚೆಗಳು ನಡೆಯುತ್ತಿರುವ ಬಗ್ಗೆ ಸುಳಿವು ನೀಡಿದರು.

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಮತ್ತು ಜೆಡಿ (ಯು) ಎನ್‌ಡಿಎ ಮೈತ್ರಿಕೂಟ ಮತ್ತು ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ಇಂಡಿಯಾ ಬಣಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net